ಮುದರಂಗಡಿ ಅಕ್ರಮ ಗ್ಯಾಸ್ ಫಿಲ್ಲಿಂಗ್ ಮಾಡುತ್ತಿದ್ದ ಕಾರ್ಮಿಕರ ಮನೆಗೆ ದಾಳಿ ನಡೆಸಿ ಗ್ಯಾಸ್ ಸಿಲಿಂಡರ್ ಸಹಿತ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ 
ಜಿಲ್ಲೆ

ಅಕ್ರಮ ಗ್ಯಾಸ್ ಫಿಲ್ಲಿಂಗ್ ನಿರತರ ಬಂಧನ

ಇಂದಿರಾ ಎನ್ ಕೆ

ಪಡುಬಿದ್ರಿ: ಮುದರಂಗಡಿ ಎಚ್‌ಪಿ ಗ್ಯಾಸ್ ಏಜೆನ್ಸಿ ಗೋಡೌನ್ ಹತ್ತಿರದಲ್ಲಿನ ಅದರ ಮೂವರು ಲೋಡಿಂಗ್ ಕಾರ್ಮಿಕರ ಮನೆಗೆ ಕಾಪು ಆಹಾರ ನಿರೀಕ್ಷಕರ ಜತೆಗೂಡಿ ಪಡುಬಿದ್ರಿ ಪೊಲೀಸರು ಶನಿವಾರ ದಾಳಿ ನಡೆಸಿ ಗ್ರಾಹಕರಿಗೆ ನೀಡಬೇಕಾಗಿರುವ ಗ್ಯಾಸ್ ಸಿಲಿಂಡರ್‌ಗಳಿಂದ ಕಮರ್ಷಿಯಲ್ ಸಿಲಿಂಡರ್‌ಗಳಿಗೆ ಅಕ್ರಮವಾಗಿ ಗ್ಯಾಸ್ ಫಿಲ್ಲಿಂಗ್ ಮಾಡುತ್ತಿದ್ದ ರಾಜಸ್ತಾನಿ ಕೆಲಸಗಾರರಾದ ಸುರೇಂದ್ರ ಕುಮಾರ್(25) ಮತ್ತು ಸುಖ್‌ದೇವ್(23) ಎಂಬುವರನ್ನು ಬಂಧಿಸಿದ್ದಾರೆ.

ಓರ್ವ ಘಟನಾ ಸ್ಥಳದಿಂದ ಪರಾರಿಯಾಗಿದ್ದಾನೆ. ಆರೋಪಿಗಳಿಂದ 11 ಗೃಹಬಳಕೆಯ ಹಾಗೂ 4 ವಾಣಿಜ್ಯೋದ್ದೇಶದ ಗ್ಯಾಸ್ ಸಿಲಿಂಡರ್ ವಶಪಡಿಸಿಕೊಳ್ಳಲಾಗಿದೆ. ಪಡುಬಿದ್ರಿ ಠಾಣಾಧಿಕಾರಿ ಪ್ರಸನ್ನ ಅವರಿಗೆ ಬಂದ ಖಚಿತ ಮಾಹಿತಿಯನ್ವಯ ಅದನ್ನು ಕಾಪು ತಹಸೀಲ್ದಾರ್ ಪ್ರತಿಭಾ ಅವರಿಗೆ ರವಾನಿಸಲಾಗಿತ್ತು. ಕಾಪು ಆಹಾರ ನಿರೀಕ್ಷಕ ಎಂ.ಟಿ.ಲೀಲಾನಂದ ಜತೆ ಪೊಲೀಸರ ದಾಳಿ ಸಂಘಟಿಸಿ ಈ ಅಕ್ರಮ ಬಯಲಿಗೆಳೆದಿದ್ದಾರೆ.