ಹೂವಿನಹಡಗಲಿ: ಪಟ್ಟಣದ ಸಣ್ಣ ನೀರಾವರಿ ಅಂತರ್ಜಲ ಅಭಿವೃದ್ಧಿ ಇಲಾಖೆಯ ಉಪವಿಭಾಗ ಕಚೇರಿ ಮುಂಭಾಗದಲ್ಲಿ ಸಣ್ಣ ಏತ ನೀರಾವರಿ ಯೋಜನೆ ಹಾಗೂ ನಿರ್ವಾಹಕರ ಮತ್ತು ನೀರಗಂಟಿ, ದಿನಗೂಲಿ ನೌಕರರ ಸಂಘ ಕೈಗೊಂಡಿದ್ದ ಅನಿರ್ದಿಷ್ಟಾವಧಿ ಧರಣಿ ಗುರುವಾರ ಅಂತ್ಯಗೊಂಡಿತು.
ಇದನ್ನೂ ಓದಿ: ದಿನಗೂಲಿ ನೌಕರ ರಾಜಕೀಯ ಪಕ್ಷಕ್ಕೆ 1,368 ಕೋಟಿ ದಾನ ಮಾಡುವ ಮಟ್ಟಕ್ಕೆ ಬೆಳೆದಿದ್ಹೇಗೆ? ಇಲ್ಲಿದೆ ರೋಚಕ ಸಂಗತಿ
ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ನೀರಗಂಟಿ ಪಂಪ್ ಆಪರೇಟರ್‌ಗಳ ವೇತನ ಹಾಗೂ ಸೇವಾ ಭದ್ರತೆ ಸೇರಿದಂತೆ ಇತರ ಸೌಲಭ್ಯಗಳನ್ನು ಕಲ್ಪಿಸುವಂತೆ ಒತ್ತಾಯಿಸಿ ಮಂಗಳವಾರ ಧರಣಿ ಆರಂಭಿಸಲಾಗಿತ್ತು.
ವಿವಿಧ ಸಂಘಟನೆಗಳ ಬೆಂಬಲದಿಂದಾಗಿ ಬುಧವಾರ ಮತ್ತು ಗುರುವಾರ ಧರಣಿ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಶಾಸಕ ಕೃಷ್ಣನಾಯ್ಕ ಅವರು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
ಗುರುವಾರ ಸ್ಥಳಕ್ಕೆ ಇಇ ನವೀನ ಕುಮಾರ್ ಆಗಮಿಸಿ ಧರಣಿ ಹಿಂಪಡೆಯುವಂತೆ ಕೋರಿದರು. ಪ್ರತಿಭಟನಾಕಾರರು ಹಿಂದೆ ಸರಿಯದೆ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಂಡ ಗುತ್ತಿಗೆದಾರರನ್ನು ಸ್ಥಳಕ್ಕೆ ಕರೆಸುವಂತೆ ಪಟ್ಟುಹಿಡಿದರು. ನಿಮ್ಮ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ. ನಮ್ಮ ಸಮಸ್ಯೆಗಳನ್ನು ನೀವೇ ಪರಿಹರಿಸಿ ಎಂದರು.
ಸಂಜೆ ಇಇ ನವೀನ ಕುಮಾರ ಪ್ರತಿಭಟನಾಕಾರರ ಸಭೆ ನಡೆಸಿ, ಇಲಾಖೆಯಿಂದ ದೊರೆಯುವ ಸೌಲಭ್ಯಗಳನ್ನು ಕಲ್ಪಿಸಲಾಗುವುದಿಲ್ಲ. ಗುತ್ತಿಗೆದಾರರೊಂದಿಗೆ ಒಪ್ಪಂದ ಮಾಡಿಕೊಂಡು ಕಾರ್ಯನಿರ್ವಹಿಸುತ್ತಿರುವಿರಿ.
ನಿಮ್ಮ ಬೇಡಿಕೆಗಳನ್ನು ಮುಂದಿನ ಟೆಂಡರ್ ಪ್ರಕ್ರಿಯೆಯಲ್ಲಿ ಸೇರಿಸಿ ಗುತ್ತಿಗೆ ಪಡೆದ ಗುತ್ತಿಗೆದಾರರು ಒದಗಿಸಬೇಕು ಎಂದು ಸೂಚನೆ ನೀಡಲಾಗುವುದು. ಇನ್ನು 15 ದಿನದೊಳಗಾಗಿ 2022-23ನೇ ಸಾಲಿನ ಬಾಕಿ ವೇತನ ಕೊಡಿಸುವೆ ಎಂದು ಲಿಖಿತವಾಗಿ ಭರವಸೆ ನೀಡಿದರು. ನಂತರ ಪ್ರತಿಭಟನಾಕಾರರು ಹೋರಾಟ ಕೈಬಿಟ್ಟರು. ಬೇಡಿಕೆಗಳನ್ನು ಈಡೇರಿಸದಿದ್ದರೆ ಮತ್ತೆ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಎಐಟಿಯುಸಿ ತಾಲೂಕು ಸಂಚಾಲಕ ಹಲಗಿ ಸುರೇಶ, ಕಟ್ಟಡ ಕಾರ್ಮಿಕರ ಸಂಘದ ತಾಲೂಕು ಅಧ್ಯಕ್ಷ ಜಂಗ್ಲಿಸಾಬ್, ರೈತಸಂಘದ ತಾಲೂಕು ಅಧ್ಯಕ್ಷ ಹೊಸಮನಿ ಸಿದ್ದಪ್ಪ, ಹೊರಗುತ್ತಿಗೆ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಬಸವರಾಜ ಇತರರಿದ್ದರು.