ಅಡಿಕೆ ಎಳೆ ಕಾಯಿ ಉದುರುವಿಕೆ ಸಮಸ್ಯೆ ಕುರಿತಂತೆ ವಲಯ ಕೃಷಿ ಹಾಗೂ ತೋಟಗಾರಿಕೆ ಸಂಶೋಧಾನಾ ಕೇಂದ್ರ, ಬ್ರಹ್ಮಾವರದ ವಿಜ್ಞಾನಿಗಳ ತಂಡ ರೈತರ ತೋಟಗಳಿಗೆ ಭೇಟಿ ನೀಡಿ ಇತ್ತೀಚಿಗೆ ಪರಿಶೀಲನೆ ನಡೆಸಿದೆ 
ಜಿಲ್ಲೆ

ವಿಜ್ಞಾನಿಗಳಿಂದ ಅಡಕೆ ಸಮಸ್ಯೆ ಅಧ್ಯಯನ : ತಜ್ಞರಿಂದ ಔಷಧ ಸಿಂಪಡಣೆಯ ಮಾಹಿತಿ; ಹಲವು ರೈತರ ತೋಟಗಳಿಗೆ ಭೇಟಿ

ಇಂದಿರಾ ಎನ್ ಕೆ

ವಿಜಯವಾಣಿ ಸುದ್ದಿಜಾಲ ಹೆಬ್ರಿ

ಅಡಕೆ ಎಳೆಕಾಯಿ ಉದುರುವಿಕೆ ಸಮಸ್ಯೆ ಕುರಿತು ಅಧ್ಯಯನ ನಡೆಸುವುದಕ್ಕಾಗಿ ಬ್ರಹ್ಮಾವರ ವಲಯ ಕೃಷಿ ಹಾಗೂ ತೋಟಗಾರಿಕಾ ಸಂಶೋಧನಾ ಕೇಂದ್ರದ ವಿಜ್ಞಾನಿಗಳ ತಂಡ ರೈತರ ತೋಟಗಳಿಗೆ ಭೇಟಿ ನೀಡಿದೆ.

ರೋಗದ ಕುರಿತು ವಿಜ್ಞಾನಿಗಳು ಮಾಹಿತಿ ನೀಡಿದ್ದು, ಅಡಕೆ ಎಳೆಕಾಯಿ ಉದುರಲು ತಿಗಣೆ ಜಾತಿಯ ಕೀಟ ಕಾರಣವಾಗಿದೆ. ಹೆಲಿಯೋಮಾರ್ಫ ಪೈರಸ್ ಎಂಬ ಕೀಟದ ಮರಿ ಹಾಗೂ ಇತರ ಹುಳುಗಳು ಎಳೆ ಅಡಕೆಯ ತೊಟ್ಟಿನ ಭಾಗದಲ್ಲಿ ಚುಚ್ಚಿ ಒಳಭಾಗದ ತಿರುಳಿನ ರಸ ಹೀರುತ್ತವೆ. ಇವುಗಳು ಸಣ್ಣ ಮಿಳ್ಳೆಗಳಿಂದ ಹಿಡಿದು ಮಧ್ಯಮ ಗಾತ್ರದ ಅಡಕೆ ಕಾಯಿಗಳಿಗೆ ಹಾನಿ ಉಂಟುಮಾಡುತ್ತವೆ. ಈ ಕೀಟಗಳ ತೀವ್ರತೆ ಕಡಿಮೆ ಇದ್ದಲ್ಲಿ 5 ಮಿ.ಲೀ ಬೇವಿನ ಎಣ್ಣೆ 1ಲೀ. ನೀರಿನಲ್ಲಿ ಬೆರೆಸಿ ಬಾಧಿತ ಮರ ಹಾಗೂ ಅದರ ಸುತ್ತಮುತ್ತಲಿನ ಮರಗಳಿಗೆ ಸಿಂಪಡಿಸಬಹುದು. ಬಾಧೆಯ ತೀವ್ರತೆ ಜಾಸ್ತಿ ಇದ್ದರೆ ಕ್ಲೋಥಿಯಾನಿಡಿನ್, ಪೈಮೆಟ್ರೋಜಿನ್, ಡೈಮಿಥೋಯೆಟ್ ಅಥವಾ ಥೈಯಾಮೆಥಾಕ್ಸಾನ್ ಪೈಕಿ ಒಂದನ್ನು ಬೆರೆಸಿ 15 ದಿನಗಳ ಅಂತರದಲ್ಲಿ ಸಿಂಪಡಿಸಬೇಕು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಬ್ರಹ್ಮಾವರ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ತೋಟಗಾರಿಕೆ ತಜ್ಞ ಡಾ.ಚೈತನ್ಯ, ಸೂಕ್ಷ್ಮಾಣು ಜೀವಿ ತಜ್ಞ ಡಾ. ಸಂತೋಷ ಗೌಡ ಜಿ.ಬಿ, ಸಸ್ಯರೋಗ ತಜ್ಞ ಡಾ.ಸಂಜೀವ ಜಕಾತಿಮಠ, ಕಾರ್ಕಳ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಶ್ರೀನಿವಾಸ ಬಿ.ವಿ ಇದ್ದರು.

ಹಿಂಗಾರ ಒಣಗುವ ರೋಗ

ಹೆಬ್ರಿ ತಾಲೂಕಿನ ಹಂದಿಕಲ್ಲು ಹಾಗೂ ಕುಚ್ಚೂರು ಗ್ರಾಮದ ಕೆಲವು ಅಡಕೆ ತೋಟಗಳಲ್ಲಿ ಹಿಂಗಾರ ಒಣಗುವ ರೋಗ ಕಂಡುಬಂದಿದೆ. ಇದು ಕೊಲೆಟೋಟ್ರೈಕಮ್ ಶಿಲೀಂಧ್ರದಿಂದ ಉಂಟಾಗುತ್ತಿದ್ದು, ಅಡಕೆಯಲ್ಲಿ ಪೋಷಕಾಂಶಗಳ ನಿರ್ವಹಣೆ ಹಾಗೂ ಸೂಕ್ತ ರಾಸಾಯನಿಕಗಳ ಸಿಂಪಡಣೆಯಿಂದ ರೋಗ ನಿಯಂತ್ರಿಸಬಹುದು. ಎಳೆಯ ಹಿಂಗಾರಗಳು ಹಳದಿಯಾಗಿದ್ದು, ಒಣಗುವುದರ ಜತೆಗೆ ಕಪ್ಪಾಗಿದ್ದರೆ, ರೋಗ ಬಾಧಿಸಿರುವುದು ಖಚಿತ. ಇಂತಹ ಕಪ್ಪಾದ ಸಿಂಗಾರಗಳನ್ನು ಸ್ವಚ್ಛಗೊಳಿಸಿ ಹೊಸದಾಗಿ ಬರುವ ಹಿಂಗಾರಗಳಿಗೆ ಕಾರ್ಬನ್ ಡೇಜಮ್ ಹಾಗೂ ಮ್ಯಾಂಕೋಜೆನ್ ಬೆರೆಸಿ ಸಿಂಪಡಿಸಬೇಕೆಂದು ವಿಜ್ಞಾನಿಗಳು ತಿಳಿಸಿದ್ದಾರೆ.