ಜಿಲ್ಲೆ

ಪಿಎಸ್​ಐ ನೇಮಕಾತಿ ಅರ್ಜಿ ಆಹ್ವಾನಕ್ಕೆ ತಡೆ

ರಮೇಶ್​ ಕುಮಾರ್​​ ಬಿ ಎಡಮೋಳೆ

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಸಬ್ ಇನ್​ಸ್ಪೆಕ್ಟರ್ ಹುದ್ದೆಗಳ ನೇಮಕಾತಿಗೆ ಜೂನ್ 1ರಿಂದ 30ವರೆಗೆ ಕರೆಯಲಾಗಿದ್ದ ಅರ್ಜಿ ಆಹ್ವಾನ ಆದೇಶಕ್ಕೆ ತಾತ್ಕಾಲಿಕವಾಗಿ ತಡೆ ನೀಡಲಾಗಿದೆ.

2020-21ನೇ ಸಾಲಿನಲ್ಲಿ ಕರೆಯಲಾಗಿದ್ದ ಪಿಎಸ್​ಐ (ಸಿವಿಲ್) 431 ಮತ್ತು ಕಲ್ಯಾಣ ಕರ್ನಾಟಕ- 125 ಹುದ್ದೆಗಳ ನೇರ ನೇಮಕಾತಿಗೆ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಜೂ.1ರಿಂದ 30 ವರೆಗೆ ಅರ್ಜಿ ಸಹ ಅಹ್ವಾನಿಸಲಾಗಿತ್ತು. ಆಡಳಿತಾತ್ಮಕ ಕಾರಣಗಳಿಂದಾಗಿ ಅರ್ಜಿ ಆಹ್ವಾನ ದಿನಾಂಕವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿ ಅಮೃತ್ ಪಾಲ್ ತಿಳಿಸಿದ್ದಾರೆ.

ಇತ್ತೀಚೆಗೆ ಪಿಎಸ್​ಐ ಹುದ್ದೆಗಳ ಆಕಾಂಕ್ಷಿಗಳ ವಯೋಮಿತಿಯನ್ನು ಸಾಮಾನ್ಯ ವರ್ಗಕ್ಕೆ 28ರಿಂದ 30ಕ್ಕೆ ಮತ್ತು ಎಸ್​ಸಿ-ಎಸ್​ಟಿಗೆ 30ರಿಂದ 32 ವರ್ಷಕ್ಕೆ ಹೆಚ್ಚಿಸಲಾಗಿತ್ತು. ಇದಕ್ಕೂ ಮೊದಲೇ ಪಿಎಸ್​ಐಗಳ ನೇಮಕಾತಿಗೆ ಸರ್ಕಾರ ಅಧಿಸೂಚನೆ ಹೊರಡಿಸಿದ ಪರಿಣಾಮ ವಯೋಮಿತಿ ಸಡಿಲಿಕೆ ಅನ್ವಯ ಆಗುತ್ತಿರಲಿಲ್ಲ. ಅದಕ್ಕಾಗಿ ಹೊಸದಾಗಿ ಅಧಿಸೂಚನೆ ಹೊರಡಿಸುವ ಸಾಧ್ಯತೆ ಇದೆ. ಕೋವಿಡ್-19 ಲಾಕ್​ಡೌನ್ ಜೂ.30ರ ವರೆಗೆ ವಿಸ್ತರಣೆಗೊಂಡ ಪರಿಣಾಮ ಅರ್ಜಿ ಆಹ್ವಾನ ದಿನಾಂಕ ರದ್ದು ಮಾಡಲಾಗಿದೆ ಎನ್ನಲಾಗಿದೆ.