ಜಿಲ್ಲೆ

ವಿವಿಧ ಬೇಡಿಕೆ ಈಡೇರಿಸಲು ಗಂಗೊಳ್ಳಿ ಮೀನುಗಾರರ ಸಂಘದಿಂದ ಮನವಿ

ಗಂಗೊಳ್ಳಿ: ಮೀನುಗಾರರ ರಕ್ಷಣೆ, ಗಂಗೊಳ್ಳಿ ಬಂದರಿಗೆ ಅತೀ ಅವಶ್ಯವಿರುವ ತರಬೇತಿ ಪಡೆದ ನುರಿತ ರಕ್ಷಣಾ ಪಡೆ ರಚಿಸಬೇಕು, ಜೆಟ್ಟಿ ಅಭಿವೃದ್ಧಿ, ಅಳಿವೆ ಬಾಗಿಲು ಹೂಳೆತ್ತುವುದು ಸಹಿತ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರಾವಳಿ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಸಂ ಗಂಗೊಳ್ಳಿ ವಲಯ ವತಿಯಿಂದ ಅಧ್ಯಕ್ಷ ಯಶವಂತ್ ಖಾರ್ವಿ ನೇತೃತ್ವದಲ್ಲಿ ಮೀನುಗಾರಿಕೆ ಮತ್ತು ಬಂದರು ಸಚಿವ ಎಸ್.ಮಂಕಾಳ ವೈದ್ಯ ಅವರಿಗೆ ಶನಿವಾರ ಗಂಗೊಳ್ಳಿಗೆ ಭೇಟಿ ನೀಡಿದ ವೇಳೆ ಮನವಿ ಸಲ್ಲಿಸಲಾಯಿತು.

ಬಂದರಿನ ಅಳಿವೆ ಬಾಗಿಲಲ್ಲಿ ಪದೇಪದೆ ಹೂಳು ತುಂಬುತ್ತಿರುವ ಕಾರಣ, ಅಲೆಗಳು ಹೆಚ್ಚಾಗಿ ಆಗಾಗ್ಗೆ ಅಪಾಯ ಸಂಭವಿಸುತ್ತಿದ್ದು, ಕೊಡೇರಿ ಬಂದರಿನ ಅಳಿವೆ ಬಾಗಿಲಲ್ಲಿಯೂ 56 ಜೀವಹಾನಿಗಳಾಗಿವೆ. ಅವಡ ಹಾಗೂ ಜೀವ ಹಾನಿ ತಡೆಯುವ ನಿಟ್ಟಿನಲ್ಲಿ 24*7 ಕಾರ್ಯಪ್ರವೃತ್ತರಾಗಲು ಅತ್ಯುನ್ನತ ಸಲಕರಣೆಗಳುಳ್ಳ 10ರಿಂದ 20 ಮಂದಿಯ ನುರಿತ ರಕ್ಷಣಾ ಪಡೆ ರಚಿಸಬೇಕು. ಆದಷ್ಟು ಸ್ಥಳೀಯರಿಗೆ ಅವಕಾಶ ಕೊಡಬೇಕು. ಸ್ಥಳೀಯವಾಗಿ ಮೀನುಗಾರರ ಸಭೆ ಕರೆಯಬೇಕು ಎಂದು ಒತ್ತಾಯಿಸಲಾಯಿತು.

ಅಳಿವೆ ಬಾಗಿಲಲ್ಲಿ ಹೂಳೆತ್ತಲು ಅನುದಾನ ಮಂಜೂರಾಗಿದ್ದು, ಸ್ಥಳೀಯ ಮೀನುಗಾರರ ಸಲಹೆ ಪಡೆಯದೆ, ಗಮನಕ್ಕೂ ತಾರದೆ ಅವೈಜ್ಞಾನಿಕ ಡ್ರೆಜ್ಜಿಂಗ್ ನಡೆಸಿದ್ದಾರೆ. ಮುಂದಿನ ದಿನಗಳಲ್ಲಿ ಅಳಿವೆ ಬಾಗಿಲಲ್ಲಿ ಪ್ರಾಣಾಪಾಯ ಸಂಭವಿಸುವ ಆತಂಕವೂ ಇದೆ. ಕೂಡಲೇ ಡ್ರೆಜ್ಜಿಂಗ್‌ಗೆ ಕ್ರಮಕೈಗೊಳ್ಳಬೇಕಾಗಿ ಒತ್ತಾಯಿಸಿದರು. ಶಾಸಕ ಗುರುರಾಜ ಗಂಟಿಹೊಳೆ, ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ವಾಜಿ ಶಾಸಕ ಗೋಪಾಲ ಪೂಜಾರಿ ಉಪಸ್ಥಿತರಿದ್ದರು.

ಪೂರ್ಣ ತನಿಖೆ ಇನ್ನೂ ಆಗಿಲ್ಲ

4 ವರ್ಷದ ಹಿಂದೆ ಕಳಪೆ ಕಾಮಗಾರಿಯಿಂದ ಜೆಟ್ಟಿ ಕುಸಿದಿದ್ದು, ಮರು ನಿರ್ವಾಣಕ್ಕಾಗಿ 12 ಕೋಟಿ ರೂ. ಮಂಜೂರಾಗಿತ್ತು. ಶೇ.40ರಷ್ಟು ಕಾಮಗಾರಿ ಆಗುವ ವೇಳೆ ಮತ್ತೆ ಕುಸಿದಿತ್ತು. ಈ ಬಗ್ಗೆ ಪೂರ್ಣ ತನಿಖೆ ಇನ್ನೂ ಆಗಿಲ್ಲ. ಮರು ಕಾಮಗಾರಿಯೂ ಆಗಿಲ್ಲ. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳ್ಳಬೇಕು. ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಮೀನುಗಾರರು ಆಗ್ರಹಿಸಿದರು.