ವಿಜಯವಾಣಿ ಸುದ್ದಿಜಾಲ ಕುಂದಾಪುರ ಜಾತಿ, ಮತ, ಪಂಥ ಮೀರಿ ಬೆಳೆದ ಸರ್ವಜನಪ್ರೀತ ಜನ ನಾಯಕ ಬಿ.ಅಪ್ಪಣ್ಣ ಹೆಗ್ಡೆ. ಅನಿಸಿದನ್ನು ನೇರ, ದಿಟ್ಟ, ಸ್ಪಷ್ಟವಾಗಿ ಹೇಳಿ ಸತ್ಯ ಪ್ರತಿಪಾದನೆ ಮಾಡುವಂತಹ ಶಕ್ತಿ ಇರುವ ಹಿರಿಯ ತಲೆಮಾರಿನ ರಾಜಕಾರಣಿಗಳಲ್ಲಿ ಅಪ್ಪಣ್ಣ ಹೆಗ್ಡೆ ಒಬ್ಬರು. ಅಪ್ಪಣ್ಣ ಹೆಗ್ಡೆಯವರ ಶ್ರಮಕ್ಕೆ ಸರಿಗಟ್ಟುವ ಪ್ರಶಸ್ತಿ ನಿರ್ಮಾಣ ಮಾಡುವುದು ಸುಲಭವಲ್ಲ. ಕೋ.ಮ.ಕಾರಂತ ಹೆಸರಿನಲ್ಲಿ ಅಪ್ಪಣ್ಣ ಹಗ್ಡೆಯವರಿಗೆ ಪ್ರಶಸ್ತಿ ನೀಡುತ್ತಿರುವುದು ಈ ಪ್ರಶಸ್ತಿಗೆ ಒಂದು ಗೌರವ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಬಸ್ರೂರಿನ ಬಿ.ಅಪ್ಪಣ್ಣ ಹೆಗ್ಡೆ ನಿವಾಸದಲ್ಲಿ ಭಾನುವಾರ ಕುಂದಾಪುರದ ಕುಂದಪ್ರಭ ಸಂಸ್ಥೆ ವತಿಯಿಂದ ಕೊಡಮಾಡುವ ಕೋ.ಮ.ಕಾರಂತ ಪ್ರಶಸ್ತಿಯನ್ನು ಮಾಜಿ ಶಾಸಕ, ಬಸ್ರೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ.ಅಪ್ಪಣ್ಣ ಹೆಗ್ಡೆ ಅವರಿಗೆ ಪ್ರದಾನ ಮಾಡಿ ಮಾತನಾಡಿದರು. ಅರ್ಜಿ ಕೊಟ್ಟು ತೆಗೆದುಕೊಳ್ಳುವ ಪ್ರಶಸ್ತಿಗಿಂತ ಇಂತಹ ಶ್ರೇಷ್ಠ ಪ್ರಶಸ್ತಿ ಉತ್ತಮ. ಸಮಾಜದಲ್ಲಿ ಯಾವ ಬದಲಾವಣೆ ಬೇಕಾದರೂ ಆಗಿರಲಿ ಆದರೆ ಅಪ್ಪಣ್ಣ ಹೆಗ್ಡೆ ನಿಲುವಿನಲ್ಲಿ ಬದಲಾವಣೆಗಳಿರಲಿಲ್ಲ. ರಾಜಕಾರಣದ ಮುಖದ, ರಾಜಕಾರಣದ ಹಣದ ಹೆದರಿಕೆ, ರಾಜಕಾರಣದ ಬೆದರಿಕೆ ಇರದ ಜನಮಾನಸದಲ್ಲಿರುವ ಮತ್ತೊಬ್ಬ ಶಕ್ತಿ ಅಪ್ಪಣ್ಣ ಹೆಗ್ಡೆ ಎಂದು ಅಭಿಪ್ರಾಯಪಟ್ಟರು. ಬಿ.ಅಪ್ಪಣ್ಣ ಹೆಗ್ಡೆ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. ಕೋಟದ ಉದ್ಯಮಿ ಆನಂದ ಸಿ.ಕುಂದರ್, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಕುಂಭಾಶಿ ಆನೆಗುಡ್ಡೆ ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಆಡಳಿತ ಧರ್ಮದರ್ಶಿ ರಮಣ ಉಪಾಧ್ಯಾಯ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಜಿಲ್ಲಾಧ್ಯಕ್ಷ ಎ.ಎಸ್.ಎನ್.ಹೆಬ್ಬಾರ್, ಕುಂದಾಪುರ ತಾಲೂಕು ಕಸಾಪ ಅಧ್ಯಕ್ಷ ಡಾ.ಉಮೇಶ ಪುತ್ರನ್, ಸಾಹಿತಿ ಕೋ.ಶಿವಾನಂದ ಕಾರಂತ, ಅಪ್ಪಣ್ಣ ಹೆಗ್ಡೆ ಕುಟುಂಬಸ್ಥರು ಮೊದಲಾದವರು ಉಪಸ್ಥಿತರಿದ್ದರು. ಕುಂದಪ್ರಭ ಸಂಸ್ಥೆ ಸಂಪಾದಕ ಯು.ಎಸ್.ಶೆಣೈ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಸಮಾಜದಲ್ಲಿ ಭಾಷೆ, ನಾಡಿನ ಬಗ್ಗೆ ವಿಶೇಷ ಆದ್ಯತೆ ನೀಡಿ ಅನೇಕ ವಿಚಾರ ಬೆಳಕಿಗೆ ತಂದಿರುವುದು ಶ್ಲಾಘನೀಯ. ಮುಂದಿನ ದಿನಗಳಲ್ಲಿ ನಮ್ಮ ನಡುವೆ ಸಂಬಂಧ, ಸಂಪರ್ಕ ಇನ್ನಷ್ಟು ವೃದ್ಧಿಯಾಗುವುದರೊಂದಿಗೆ ದೇಶ, ನಾಡಿನ ಸೇವೆ ಸಲ್ಲಿಸುವಂತಾಗಲಿ. ನಮ್ಮ ಭಾಷೆಯ ಸೊಗಡು ಇನ್ನಷ್ಟು ಪಸರಿಸುವಂತಾಗಲಿ. ಕನ್ನಡ ಭಾಷೆ ಹೊಸ ಆಕೃತಿಯಲ್ಲಿ ರೀತಿಯಲ್ಲಿ ಬೆಳೆಯುವಂತಾಗಲಿ. ಬಿ.ಅಪ್ಪಣ್ಣ ಹೆಗ್ಡೆ ಮಾಜಿ ಶಾಸಕ