ಜಿಲ್ಲೆ

ಗೃಹ ನಿರ್ಮಾಣ ಸಂಭ್ರಮಕ್ಕೆ ಕೊಳ್ಳಿ ಇಟ್ಟ ಜವರಾಯ, ಶಾಮಿಯಾನ ಅವಳಡಿಸುತ್ತಿದ್ದ ನಾಲ್ವರು ದುರ್ಮರಣ

arunakunigal

ಆನೇಕಲ್: ಕನಸಿನ ವಸತಿ ಸಮುಚ್ಛಯ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡಲು ಭರದಿಂದ ಸಿದ್ಧತೆ ನಡೆಯುತ್ತಿತ್ತು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ನಾಳೆ ಆ ಜಾಗದಲ್ಲಿ ಸಂಭ್ರಮ ಕಳೆಗಟ್ಟಬೇಕಿತ್ತು. ಆದರೆ ಮುನ್ನಾ ದಿನವೇ ವಿದ್ಯುತ್​ ರೂಪದಲ್ಲಿ ಬಂದ ಜವರಾಯ ಅಟ್ಟಹಾಸ ಮೆರೆದು ನಾಲ್ವರ ಪ್ರಾಣ ಹೊತ್ತೊಯ್ದಿದ್ದಾನೆ.

ಬೆಂಗಳೂರು ನಗರ‌ ಜಿಲ್ಲೆ ಆನೇಕಲ್ ತಾಲೂಕಿನ ಅತ್ತಿಬೆಲೆಯ ಇಂಡ್ಳಬೆಲೆಯಲ್ಲಿ ಬುಧವಾರ ವಿದ್ಯುತ್​ ಅವಘಡ ಸಂಭವಿಸಿದ್ದು, ಹೊಸರೋಡಿನ ಉಷಾಕಿರಣ್ ಟೆಂಟ್ ಹೌಸ್ ಕಾರ್ಮಿಕರಾದ ಆಕಾಶ್(30), ಮಹಾದೇವ್(35), ವಿಷಕಂಠ(35) ಮತ್ತು ವಿಜಯ್(30) ಮೃತಪಟ್ಟಿದ್ದಾರೆ.

ನಾಳೆ(ಗುರುವಾರ) ಇಂಡ್ಳಬೆಲೆಯಲ್ಲಿ ಜೆ.ಆರ್.ಕನ್'ಸ್ಟ್ರಕ್ಷನ್ ಬೆಂಗಳೂರು ಅಪಾರ್ಟ್ಮೆಂಟ್ ನಿರ್ಮಾಣದ ಭೂಮಿ ಪೂಜೆ ಕಾರ್ಯಕ್ರಮ ಇತ್ತು. ಈ ಕಾರ್ಯಕ್ರಮದ ನಿಮಿತ್ತ ಶಾಮಿಯಾನ ಹಾಕಲು ಕಾರ್ಮಿಕರು ಬಂದಿದ್ದರು. ಈ ಬಡಾವಣೆ ಒಳಗೆ 11 ಕೆ.ವಿ.‌ ವಿದ್ಯುತ್ ತಂತಿ ಹಾದುಹೋಗಿದೆ. ಶಾಮಿಯಾನಕ್ಕೆ ಕಬ್ಬಿಣದ ಸರಳು ಅಳವಡಿಸುವಾಗ ವಿದ್ಯುತ್​ ತಂತಿಗೆ ತಗುಲಿದ್ದು, ವಿದ್ಯುತ್​ ಪ್ರವಹಿಸಿ ನಾಲ್ವರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ವಿದ್ಯುತ್ ತಂತಿ ಹಾದುಹೋಗಿರುವ ಬಗ್ಗೆ ಬಡಾವಣೆ ಮಾಲೀಕ ಎಚ್ಚೆತ್ತುಕೊಂಡಿರಲಿಲ್ಲ. ಕಾರ್ಮಿಕರಿಗೆ ಮೊದಲೇ ಎಚ್ಚರಿಕೆ ನೀಡಿದ್ದರೆ ಅವಘಡವೂ ಸಂಭವಿಸುತ್ತಿರಲಿಲ್ಲ. ಬಡಾವಣೆ ನಿರ್ಮಾಣ ಮಾಡುತ್ತಿರುವ ಮಾಲೀಕನ ಬೇಜವಾಬ್ದಾರಿಗೆ ಅಮಾಯಕರು ಬಲಿಯಾಗಿದ್ದಾರೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದರು.

ಸ್ಥಳಕ್ಕೆ ಅತ್ತಿಬೆಲೆ ಪೊಲೀಸರು ಮತ್ತು ಬೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ಡಿ. ಚೆನ್ನಣ್ಣನವರ್ ಭೇಟಿ ನೀಡಿದ್ದರು.