ಮೂಡುಬಿದಿರೆ: ಮಾದಕ ವಸ್ತುಗಳಿಗೆ ಹದಿಹರೆಯದವರು ಮಾತ್ರವಲ್ಲ ಕೆಲವೊಮ್ಮೆ ಮಕ್ಕಳು ಬಲಿಯಾಗುತ್ತಿರುವುದು ಖೇದಕರ. ಇದರಿಂದ ಎಳೆ ವಯಸ್ಸಿನಲ್ಲೇ ದೇಹ ಹಾಗೂ ಮನಸ್ಸಿನ ಆರೋಗ್ಯ ಕೆಡುತ್ತಿದೆ. ಮಾದಕ ವ್ಯಸನಿಗಳು ತಮ್ಮ ಆರೋಗ್ಯ ಕೆಡಿಸುವುದು ಮಾತ್ರವಲ್ಲ ಅಪರಾಧ ಚಟುವಟಿಕೆಗಳಲ್ಲಿ ತೊಡಗಿ ಸಮಾಜದ ಆರೋಗ್ಯ ಕೆಡಿಸುತ್ತಾರೆ. ಮಾದಕ ವ್ಯಸನದಿಂದ ದೂರವಿದ್ದರೆ ಉತ್ತಮ ಬದುಕು ಕಟ್ಟಿಕೊಳ್ಳಬಹುದು ಎಂದು ಮೂಡುಬಿದಿರೆ ಆರಕ್ಷಕ ಠಾಣೆ ಪಿಎಸ್‌ಐ ಪ್ರತಿಭಾ ಹೇಳಿದರು.
ಮೂಡುಬಿದಿರೆ ಎಕ್ಸಲೆಂಟ್ ವಿದ್ಯಾಸಂಸ್ಥೆ ಎನ್‌ಎಸ್‌ಎಸ್, ಮಾದಕ ವ್ಯಸನ ವಿರೋಧಿ ಸಮಿತಿ ಹಾಗೂ ಮೂಡುಬಿದಿರೆ ಆರಕ್ಷಕ ಠಾಣೆ ಸಹಯೋಗದೊಂದಿಗೆ ನಡೆದ ಮಾದಕ ವ್ಯಸನ ವಿರೋಧಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ನಿತಿನ್ ಮಾದಕ ವ್ಯಸನ ವಿರೋಧಿ ಪ್ರತಿಜ್ಞಾವಿಧಿ ಬೋಧಿಸಿದರು. ವಿದ್ಯಾರ್ಥಿಗಳಾದ ರಶ್ಮಿತಾ ಶೆಟ್ಟಿ ಹಾಗೂ ಸಂಜನ್ ಕೋಟೆ ಮಾದಕ ವ್ಯಸನದ ಕುರಿತು ಮಾತಾನಾಡಿದರು. ಮಾದಕ ವ್ಯಸನ ವಿರೋಧಿ ಸಮಿತಿ ಮುಖ್ಯಸ್ಥ ಪ್ರದೀಪ್ ಕೆ.ಪಿ. ಉಪಸ್ಥಿತರಿದ್ದರು. ಕಾರ್ತಿಕ್ ಎಚ್. ನಿರೂಪಿಸಿದರು. ಕಾರ್ತಿಕ್ ಅಗಡಿ ವಂದಿಸಿದರು. ವಿದ್ಯಾರ್ಥಿಗಳಿಂದ ಮಾದಕ ವ್ಯಸನ ಮುಕ್ತ ಸಮಾಜ ಎಂಬ ಪ್ರಹಸನ ನಡೆಯಿತು.