ಬೆಂಗಳೂರು: ಕನ್ನಡ ಮತ್ತು ಸಂಸತಿ ಇಲಾಖೆ ಸಹಕಾರದೊಂದಿಗೆ ಅಂತರಂಗ ಹವ್ಯಾಸಿ ನಾಟಕ ತಂಡ ಜಯನಗರದ ನ್ಯಾಷನಲ್ ಕಾಲೇಜಿನ ಎಚ್.ಎನ್.ಕಲಾಕ್ಷೇತ್ರದಲ್ಲಿ ಕಳೆದ ಭಾನುವಾರ ಆಯೋಜಿಸಿದ್ದ 24ನೇ ವರ್ಷದ 'ಹಾಸ್ಯಮೇಳ' ಸಂಪನ್ನವಾಗಿದೆ.
'ನಗೆ ಸುಗ್ಗಿ-ಹುಗ್ಗಿ' ಕಲ್ಪನೆಯಲ್ಲಿ ನಡೆದ ವಿವಿಧ ಹಾಸ್ಯಕಾರ್ಯಕ್ರಮಗಳು ನೆರೆದಿದ್ದ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದವು. ಎಂ.ಎಸ್.ನರಸಿಂಹಮೂರ್ತಿ, ಗಂಗಾವತಿ ಪ್ರಾಣೇಶ್, ವೈವಿ.ಗುಂಡೂರಾವ್, ರವಿ ಭಜಂತ್ರಿ, ಅಚ್ಯುತರಾವ್ ಪದಕಿ ಅವರಿಂದ 'ಹಾಸ್ಯ ರಸಾಯನ' ನಡೆಯಿತು.
ಚಾಮರಾಜನಗರದ ನರಸಿಂಹಮೂರ್ತಿ ಮತ್ತು ತಂಡದಿಂದ 'ಜನಪದದಲ್ಲಿ ಹಾಸ್ಯ', ವಿಜಯನಗರ ಬಿಂಬ ತಂಡದಿಂದ 'ನಾವು ಪೌರರು' ಪ್ರಹಸನ, ರಾಧಾಕೃಷ್ಣ ಉರಾಳ ಮತ್ತು ತಂಡದಿಂದ 'ಯಕ್ಷಗಾನದಲ್ಲಿ ಹಾಸ್ಯ' ಪ್ರದರ್ಶನ, ಕನ್ನರ್ಪಾಡಿ ರಾಮಕೃಷ್ಣ ಅವರಿಂದ ಮೈಮ್ನಲ್ಲಿ ಹಾಸ್ಯ, ರಾಮನಾಥ್ ಹಾಗೂ ನಟರಾಜ್ ಅವರಿಂದ 'ಅಣಕು ಹಾಡುಗಳು', ನಾರಾಯಣ ಭಟ್ ಅವರಿಂದ ನಡೆದ ಜಾದೂ ಪ್ರದರ್ಶನ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
ರಮಣಶ್ರೀ ಪ್ರತಿಷ್ಠಾನದ ಅಧ್ಯಕ್ಷ ಎಸ್.ಷಡಕ್ಷರಿ ಉದ್ಘಾಟಿಸಿದರು. ಅಂತರಂಗ ಹವ್ಯಾಸಿ ನಾಟಕ ತಂಡದ ಕಾರ್ಯದರ್ಶಿ ಅಂಕಲ್ ಶ್ಯಾಮ್, ಸಂಚಾಲಕರಾದ ರಾಮ್ದೇವ್, ಮುರಳೀಧರ್ ಮತ್ತಿತರರಿದ್ದರು.