ಜಿಲ್ಲೆ

ಆ್ಯಸಿಡ್ ಸೇವಿಸಿದ್ದ ಮತ್ತೊಬ್ಬ ಯುವಕ ಮೃತ್ಯು : ಸಾಮೂಹಿಕ ಆತ್ಮಹತ್ಯೆ ಪ್ರಕರಣದಲ್ಲಿ ನಾಲ್ಕನೇ ವ್ಯಕ್ತಿಯೂ ಬಲಿ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಕಾಸರಗೋಡು

ಅಂಬಲತ್ತರ ಪೊಲೀಸ್ ಠಾಣೆ ವ್ಯಾಪ್ತಿಯ ಪರಕ್ಲಾಯಿಯಲ್ಲಿ ಒಂದೇ ಕುಟುಂಬದ ಮೂವರು ಸಾವಿಗೀಡಾಗಿ, ಗಂಭೀರಾವಸ್ಥೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ನಾಲ್ಕನೇ ವ್ಯಕ್ತಿಯೂ ಮೃತಪಟ್ಟಿದ್ದಾರೆ. ಪರಕ್ಲಾಯಿಯ ಒಂಡಂಪುಳಿಕ್ಕಾಲ್ ನಿವಾಸಿ ಗೋಪಿ- ಇಂದಿರಾ ದಂಪತಿ ಪುತ್ರ ರಾಕೇಶ್(27) ಮೃತಪಟ್ಟವರು. ಗೋಪಿ(60), ಅವರ ಪತ್ನಿ ಇಂದಿರಾ(57), ಪುತ್ರ ರಾಜೇಶ್(22) ಹಾಗೂ ರಾಕೇಶ್ ಅವರು ಆ.28ರಂದು ಮನೆಯೊಳಗೆ ಆ್ಯಸಿಡ್ ಸೇವಿಸಿ ಗಂಭೀರಾವಸ್ಥೆಯಲ್ಲಿ ಕಂಡುಬಂದಿದ್ದು, ತಕ್ಷಣ ಇವರನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿದರೂ ಗೋಪಿ, ಇಂದಿರಾ ಹಾಗೂ ರಾಜೇಶ್ ಮೃತಪಟ್ಟಿದ್ದರು. ರಾಕೇಶ್ ಅವರು ಜೀವನ್ಮರಣದ ಮಧ್ಯೆ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು. ಇದೊಂದು ಸಾಮೂಹಿಕ ಆತ್ಮಹತ್ಯೆಯಾಗಿದ್ದು, ಆರ್ಥಿಕ ಸಂಕಷ್ಟ ಕೃತ್ಯಕ್ಕೆ ಕಾರಣವೆಂದು ಮೇಲ್ನೋಟಕ್ಕೆ ಸಾಬೀತಾಗಿರುವುದಾಗಿ ಪೊಲೀಸರು ತಿಳಿಸಿದ್ದರು. ಬೆಳಗ್ಗೆ ಮನೆಯಲ್ಲಿ ವಾಂತಿ ಮಾಡುತ್ತಿರುವ ಶಬ್ದ ಕೇಳಿ ಆಸುಪಾಸಿನವರು ಆಗಮಿಸಿದಾಗ ಕೃತ್ಯ ಬೆಳಕಿಗೆ ಬಂದಿದ್ದು, ತಕ್ಷಣ ಅವರನ್ನು ಸ್ಥಳೀಯರು ವಾಹನದಲ್ಲಿ ಆಸ್ಪತ್ರೆಗೆ ಸಾಗಿಸಿದ್ದರು. ಅಂಬಲತ್ತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.