ಬೆಂಗಳೂರು: ಖಾಸಗಿ ವಲಯದ ಕಂಪನಿಗಳಲ್ಲಿ ಕನ್ನಡಿಗರಿಗೆ ಕಡ್ಡಾಯ ಮೀಸಲಾತಿ ನೀಡುವುದು, ಡಾ.ಸರೋಜಿನಿ ಮಹಿಷಿ ವರದಿ ಅನುಷ್ಠಾನ ತರುವುದೂ ಸೇರಿ ಇತರೆ ಬೇಡಿಕೆ ಈಡೇರಿಸಬೇಕೆಂದು ಕನ್ನಡ ಜಾಗೃತ ವೇದಿಕೆ, ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು, ವೇದಿಕೆ ಅಧ್ಯಕ್ಷ ಕೆ. ಮಂಜುನಾಥ ದೇವ ಸೇರಿ ಇತರೆ ಪದಾಧಿಕಾರಿಗಳು ಸಿಎಂ ಅವರನ್ನು ಭೇಟಿ ಮಾಡಿ ಪತ್ರ ಸಲ್ಲಿಸಿ, ಹಕ್ಕೂತ್ತಾಯ ಜಾರಿಗೆ ತರಲು ಕ್ರಮಕೈಗೊಳ್ಳುವಂತೆ ಮನವಿ ಮಾಡಿದರು.
ಉದ್ಯೋಗ ಎಂಬುದು ನಮ್ಮ ಹಕ್ಕು. ಬದುಕು ಮತ್ತು ಅಸ್ತಿತ್ವವಾಗಿದೆ. ಹೊರರಾಜ್ಯದಿಂದ ಅಧಿಕ ಸಂಖ್ಯೆ ಜನರು ಸಿಲಿಕಾನ್ ಸಿಟಿಗೆ ವಲಸೆ ಬರುತ್ತಿದ್ದು, ಬಹುತೇಕ ಕಂಪನಿಗಳ ಉದ್ಯೋಗ ಅವರ ಪಾಲಾಗುತ್ತಿವೆ. ಇದರಿಂದಾಗಿ ಕನ್ನಡಿಗರು ನಿರುದ್ಯೋಗಿಗಳಾಗುತ್ತಿದ್ದಾರೆ. ಕನ್ನಡಿಗರ ಅಸ್ಮಿತೆ, ಅಸ್ತಿತ್ವ, ಭಾಷೆ ಕುರಿತು ಅಪಾರ ಅಭಿಮಾನ ಹೊಂದಿರುವ ಸಿಎಂ ಅವರು, ಕನ್ನಡ ರಾಜ್ಯೋತ್ಸವ ದಿನದಂದು ಉದ್ಯೋಗ ಮೀಸಲಾತಿ ಘೋಷಿಸಬೇಕೆಂದು ಸಾ.ರಾ.ಗೋವಿಂದು ಆಗ್ರಹಿಸಿದ್ದಾರೆ.
ಕನ್ನಡಿಗರಿಗೆ ಮೀಸಲಾತಿ ವಿರೋಧಿಸುವ ಕಂಪನಿಗಳ ವಿರುದ್ಧ ಕ್ರಮಕೈಗೊಳ್ಳಬೇಕು. ಖಾಸಗಿ ಕಂಪನಿಗಳ ಆಡಳಿತಾತ್ಮಕ ಉದ್ಯೋಗಗಳಲ್ಲಿ ಶೇ.50ರಷ್ಟು, ಆಡಳಿತಾತ್ಮಕ ಹುದ್ದೆಗಳಲ್ಲಿ ಶೇ.75ರಷ್ಟು ಕನ್ನಡಿಗರಿಗೆ ಮೀಸಲಾತಿ ನೀಡಲು ಸಿದ್ಧಪಡಿಸಿದ್ದ ವರದಿಯನ್ನು ಜಾರಿಗೆ ತಂದು ನಿರುದ್ಯೋಗಿಗಳಿಗೆ ಉದ್ಯೋಗ ಭದ್ರತೆ ನೀಡಬೇಕು. ಈ ನಾಡಿನ ಮಣ್ಣಿನ ಮಕ್ಕಳ ಹಿತಾಸಕ್ತಿಯನ್ನು ಕಾಪಾಡುವವರು ಯಾರು ಇಲ್ಲದಂತಾಗಿದೆ. ಹಾಗಾಗಿ, ಐಟಿ&ಬಿಟಿ, ಬಹುರಾಷ್ಟ್ರೀಯ ಕಂಪನಿಗಳು, ಸಣ್ಣ ಮತ್ತು ಮಧ್ಯಮ ಬೃಹತ್ ಕೈಗಾರಿಕೆಗಳು ಸೇರಿ ಕೇಂದ್ರ ಸರ್ಕಾರದ ಅಧೀನದ ಸೇರಿದಂತೆ ಎಲ್ಲ ವಲಯಗಳಲ್ಲು ಕನ್ನಡಿಗರಿಗೆ ಆದ್ಯತೆ ನೀಡಬೇಕೆಂದು ಕೆ.ಮಂಜುನಾಥ ದೇವ ಒತ್ತಾಯಿಸಿದ್ದಾರೆ.