ಕಡಬ: ಯುವಸಮೂಹ ಧಾರ್ಮಿಕ ವೈಚಾರಿಕತೆ, ದೇಶದ ಸಂಸ್ಕೃತಿಯನ್ನು ಮರೆಯುತ್ತಿದೆ ಎನ್ನುವುದಕ್ಕೆ ಅಪವಾದವೆಂಬಂತೆ ಹಳ್ಳಿಗಳಲ್ಲಿ ಭಜನಾ ಮಂದಿರಗಳ ಮೂಲಕ ಜನ ಧರ್ಮದ ಮೂಲ ಸತ್ವದೊಂದಿಗೆ ಸಮ್ಮಿಳಿತರಾಗಿ ಬದುಕುತ್ತಿದ್ದಾರೆ ಎಂದು ಜಾರಿ ನಿರ್ದೇಶನಾಲಯದ ವಿಶೇಷ ಸರ್ಕಾರಿ ಅಭಿಯೋಜಕ ಮಹೇಶ್ ಕಜೆ ಹೇಳಿದರು.
ಮಂಗಳವಾರ ಕೊಲ ಗ್ರಾಮದ ಸಬಳೂರು ಅಯೋಧ್ಯಾನಗರ ಶ್ರೀರಾಮ ಭಜನಾ ಮಂದಿರದ ವಾರ್ಷಿಕೋತ್ಸವ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು.
ಪುಣ್ಚಪ್ಪಾಡಿ ಜನಸೇವಾ ಟ್ರಸ್ಟ್‌ನ ಅಧ್ಯಕ್ಷ ಗಿರಿಶಂಕರ ಸುಲಾಯ ಧಾರ್ಮಿಕ ಉಪನ್ಯಾಸ ನೀಡಿ, ನಮ್ಮ ಒತ್ತಡದ ಬದುಕಿನಲ್ಲಿ ನಾವು ಇಂದು ದೇವರನ್ನು ನೆನೆಯುವುದನ್ನು ಮರೆತಿದ್ದೇವೆ, ನಮ್ಮ ಒತ್ತಡ ಕಡಿಮೆ ಮಾಡಲು ಭಜನೆಯಲ್ಲಿ ತೊಡಗಿಸಕೊಳ್ಳಬೇಕು, ಭಜನಾ ಮಂದಿರಗಳಲ್ಲಿ ಇಂದು ಸಂಸ್ಕಾರ ಕಲಿಸುವ ಜತೆಗೆ ಸಂಸ್ಕೃತಿಯ ಪುನರುತ್ಥಾನದ ಕಾರ್ಯಗಳಾಗುತ್ತಿವೆ ಎಂದರು.
ಭಜನಾ ಮಂದಿರದ ಗೌರವಾಧ್ಯಕ್ಷ ಬೆಳಿಯಪ್ಪ ಗೌಡ ತಿಮರೆಗುಡ್ಡೆ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಬಳೂರು ಒಕ್ಕೂಟದ ಅಧ್ಯಕ್ಷ ಪುರಂದರ ಪೂಜಾರಿ ತುಂಬೆತಡ್ಕ, ಶ್ರೀರಾಮ ಗೆಳೆಯರ ಬಳಗದ ಅಧ್ಯಕ್ಷ ಯತಿನ್ ಸಬಳೂರು, ಸಬಳೂರು ಸರ್ಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಶೇಖರ ಗೌಡ ಪಾಪುದಮಂಡೆ ಉಪಸ್ಥಿತರಿದ್ದರು.
ಭಜನಾ ಮಂದಿರದ ಅಭಿವೃದ್ದಿಗೆ ಕೊಡುಗೆ ಹಾಗೂ ಕಾರ್ಯಕ್ರಮಕ್ಕೆ ಪ್ರಾಯೋಜಕತ್ವ ನೀಡಿದವರನ್ನು ಗೌರವಿಸಲಾಯಿತು. ಭಜನಾ ಮಂದಿರದ ಅಧ್ಯಕ್ಷ ಕೆ.ಎಸ್.ಬಾಲಕೃಷ್ಣ ಗೌಡ ಸ್ವಾಗತಿಸಿದರು. ಕಾರ್ಯದರ್ಶಿ ರಾಧಾಕೃಷ್ಣ ನಾಯ್ಕ ತುಂಬೆತಡ್ಕ ವಂದಿಸಿದರು, ಶಿಕ್ಷಕ ವೆಂಕಟೇಶ್ ಕಾರ್ಯಕ್ರಮ ನಿರೂಪಿಸಿದರು.
ಬೆಳಗ್ಗೆ ಇರ್ಕಿಮಠ ನರಹರಿ ಉಪಾಧ್ಯಾಯ ನೇತೃತ್ವದಲ್ಲಿ ಗಣಹೋಮ, ಸಂಜೆ ಸತ್ಯನಾರಾಯಣ ಪೂಜೆ, ಶ್ರೀರಾಮ ಮಹಿಳಾ ಮತ್ತು ಮಕ್ಕಳ ಕುಣಿತ ಭಜನಾ ತಂಡದಿಂದ ಕುಣಿತ ಭಜನೆ ಬಳಿಕ ಬಪ್ಪನಾಡು ಮೇಳದಿಂದ ಬಂಟನ ಬಲಿಸುತ್ತು ಎನ್ನುವ ಯಕ್ಷಗಾನ ಬಯಲಾಟ ನಡೆಯಿತು.