ಜಿಲ್ಲೆ

ಗುತ್ತಿಗೆದಾರನ ಆತ್ಮಹತ್ಯೆಗೆ-ಜಿಎಸ್‌ಟಿ ಅಧಿಕಾರಿಗಳ ಕಿರುಕುಳ ಕಾರಣ ಎಂದು ಆರೋಪಿಸಿದ ಗುತ್ತಿಗೆದಾರರ ಸಂಘ

Uttara Kannada - Subash Hegde

ಕಾರವಾರ: ಅಂಕೋಲಾದ ಗುತ್ತಿಗೆದಾರ ಬಾಲಚಂದ್ರ ಆರ್.ನಾಯಕ ಅವರ ಆತ್ಮಹತ್ಯೆಗೆ ಸರಕು ಮತ್ತು ಸೇವಾ ತೆರಿಗೆ ಇಲಾಖೆಯ ಕಿರುಕುಳವೇ ಕಾರಣ ಎಂದು ಕಾರವಾರ, ಅಂಕೋಲಾ ನೋಂದಾಯಿತ ಗುತ್ತಿಗೆದಾರರ ಸಂಘ ಆರೋಪಿಸಿದೆ.
ಇಲ್ಲಿನ ಕೆಎಚ್‌ಬಿ ಕಾಲನಿಯ ಸರಕು ಮತ್ತು ಸೇವಾ ತೆರಿಗೆಯ ಸಹಾಯಕ ಆಯುಕ್ತರ ಕಚೇರಿಯ ಎದುರು ಗುತ್ತಿಗೆದಾರರ ಸಂಘದ ಕಾರ್ಯಕರ್ತರು ಬುಧವಾರ ಸಾಂಕೇತಿಕ ಧರಣಿ ನಡೆಸಿದರು. ಸರಕು ಮತ್ತು ಸೇವೆ ತೆರಿಗೆ ಇಲಾಖೆ ವಿಽಸುತ್ತಿರುವ ಜಿಎಸ್‌ಟಿ ಬಗ್ಗೆ ಹಲವು ಆಕ್ಷೇಪಣೆಗಳ ಪಟ್ಟಿ ಸಲ್ಲಿಸಿದರು.
ಇಲಾಖೆ ಅಧಿಕಾರಿಗಳು ಐದು ವರ್ಷಗಳ ಹಿಂದಿನ ದಾಖಲೆಗಳನ್ನು ಕೇಳುತ್ತಿದ್ದಾರೆ. ಬ್ಯಾಂಕ್ ಖಾತೆಗಳನ್ನು ಸೀಜ್ ಮಾಡುತ್ತಿದ್ದಾರೆ. ಇದರಿಂದ ಕಿರುಕುಳ ಉಂಟಾಗಿದೆ ಎಂದು ಬಾಲಚಂದ್ರ ನಾಯಕ ಗುತ್ತಿಗೆದಾರ ಸಿದ್ದಾರ್ಥ ನಾಯಕ ಬಳಿ ಹೇಳಿಕೊಂಡಿದ್ದರು ಎಂದು ಸಂಘದ ತಾಕಲೂಕು ಅಧ್ಯಕ್ಷ ಮಾಧವ ನಾಯ್ಕ ಆರೋಪಿಸಿದರು.
ಗುತ್ತಿಗೆದಾರರು ಇಲಾಖೆಯ ಆಯುಕ್ತರಿಗೆ ಪತ್ರ ಬರೆದಿದ್ದು, ಇಲಾಖೆಯ ವೆಬ್‌ಸೈಟ್ ಬಳಕೆದಾರರ ಸ್ನೇಹಿಯಾಗಿಲ್ಲ. ದಾಖಲೆಗಳನ್ನು ಅಪ್‌ಲೋಡ್ ಮಾಡುವಾಗ ಸರಿಯಾದ ಮಾಹಿತಿಯನ್ನು ತೋರಿಸುತ್ತಿಲ್ಲ. ಹೆಚ್ಚಿನ ಅಧಿಕಾರಿಗಳು ಜಿಎಸ್‌ಟಿ ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಠಾನ ಮಾಡುವ ಜ್ಞಾನವನ್ನು ಹೊಂದಿಲ್ಲ ಎಂದು ಪತ್ರದಲ್ಲಿ ಆರೋಪಿಸಿದ್ದಾರೆ. ಕಾಯ್ದೆಯ ಸಮರ್ಪಕ ಜ್ಞಾನ ಇಲ್ಲದೇ ಜಿಎಸ್‌ಟಿ ಪಾವತಿದಾರರಿಗೆ ನೋಟಿಸ್ ಕೊಡಲಾಗುತ್ತಿದೆ. ಇದರಿಂದ ಹಲವರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಉಂಟಾಗುತ್ತಿದೆ ಎಂದು ದೂರಲಾಗಿದೆ. ಆದಾಯ ತೆರಿಗೆ ಪಾವತಿಯಂತೆ ವಾರ್ಷಿಕವಾಗಿ ಒಮ್ಮೆ ಜಿಎಸ್‌ಟಿ ಪಾವತಿಯ ವ್ಯವಸ್ಥೆ ಜಾರಿಗೆ ತರಬೇಕು. ಸಾಕಷ್ಟು ಬಿಲ್‌ಗಳು ಸರ್ಕಾರಿ ಇಲಾಖೆಯಲ್ಲಿ ಬಾಕಿ ಇದ್ದು, ಬಿಲ್ ಪಾವತಿ ಮಾಡುವವರೆಗೆ ಜಿಎಸ್‌ಟಿ ಪಾವತಿಗೆ ಒತ್ತಾಯ ಮಾಡಬಾರದು. ಇ-ಇನ್ವಾಯ್ಸ್ ವ್ಯವಸ್ಥೆಯನ್ನು ಜಿಎಎಸ್‌ಟಿ ಪೋರ್ಟಲ್‌ನಲ್ಲಿ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು. ಉಪಾಧ್ಯಕ್ಷ ಸಂತೋಷ ಸೈಲ್, ಕಾರ್ಯದರ್ಶಿ ಅನಿಲಕುಮಾರ್ ಮಾಳ್ಸೇಕರ್, ಜಂಟಿ ಕಾರ್ಯದರ್ಶಿ ಸುಮಂತ ಅಸ್ನೋಟಿಕರ್, ರಾಜೇಶ ಶೇಟ್ ಇತರರು ಧರಣಿಯಲ್ಲಿದ್ದರು.