ಬೆಂಗಳೂರಿನ ಅದಮ್ಯ ಚೇತನ ಸಂಸ್ಥೆಯ ಅಡುಗೆ ಮನೆಗೆ ಭೇಟಿ ನೀಡಿದ ಪದ್ಮಶ್ರೀ ಡಾ.ವಿಜಯ ಸಂಕೇಶ್ವರ ಅವರನ್ನು ಡಾ. ತೇಜಸ್ವಿನಿ ಅನಂತಕುಮಾರ್ ಅವರು ಸ್ಮರಣಿಕೆ ನೀಡಿ ಗೌರವಿಸಿದರು. ಅದಮ್ಯ ಚೇತನ ಟ್ರಸ್ಟಿ ಟಿ.ಆರ್.ಸುಬ್ರಹ್ಮಣ್ಯ, ಲೇಖಕ ವಿ.ಎ.ಗೋಪಾಲ್ ಉಪಸ್ಥಿತರಿದ್ದರು. 
ಜಿಲ್ಲೆ

ಅನಂತಕುಮಾರ್ ಜೀವನ ಮುಂದಿನ ಪೀಳಿಗೆ ತಲುಪಲಿ; ಅದಮ್ಯ ಚೇತನ ಸಂಸ್ಥೆಯ ಸೇವೆ ಶ್ಲಾಘನೀಯ: ಪದ್ಮಶ್ರೀ ಡಾ.ವಿಜಯ ಸಂಕೇಶ್ವರ ಅಭಿಪ್ರಾಯ

Webdesk - Ravikanth

ಬೆಂಗಳೂರು: ಅನಂತಕುಮಾರ್ ಅವರ ದೂರದೃಷ್ಟಿ, ಆಲೋಚನೆಗಳು ಮುಂದಿನ ಪೀಳಿಗೆಗೆ ತಲುಪಬೇಕು ಎಂದು ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಪದ್ಮಶ್ರೀ ಡಾ.ವಿಜಯ ಸಂಕೇಶ್ವರ ಅವರು ಹೇಳಿದರು. ಅದಮ್ಯ ಚೇತನ ಸಂಸ್ಥೆಯ ಬೆಂಗಳೂರು ಅಡುಗೆ ಮನೆಗೆ ಶುಕ್ರವಾರ ಭೇಟಿ ನೀಡಿದ ನಂತರ ಸಂಸ್ಥೆಯ ಸ್ವಯಂಸೇವಕರನ್ನುದ್ದೇಶಿಸಿ ಮಾತನಾಡಿದರು. ಅನಂತಕುಮಾರ್ ಅವರೊಂದಿಗೆ ಮೂರು ದಶಕಕ್ಕೂ ಹೆಚ್ಚು ಸಮಯದಿಂದ ಒಡನಾಟ ಹೊಂದಿದ್ದೆ. ಅವರ ತಾಯಿಯವರು ಅತ್ಯಂತ ಸೇವಾ ಹಾಗೂ ಧಾರ್ವಿುಕ ಮನೋಭಾವದ ವ್ಯಕ್ತಿಯಾಗಿದ್ದರು. ಅವರ ತಂದೆಯವರು ಅಧ್ಯಯನ ಪ್ರವೃತ್ತಿ ಉಳ್ಳವರಾಗಿದ್ದರು. ಅನಂತಕುಮಾರ್ ಹಾಗೂ ತೇಜಸ್ವಿನಿ ಇಬ್ಬರ ಆಲೋಚನೆಗಳಲ್ಲಿ ದೂರದೃಷ್ಟಿ ಇರುತ್ತದೆ, ಪ್ರಾಮಾಣಿಕತೆ ಇರುತ್ತದೆ ಎನ್ನುವುದನ್ನು ಅನುಭವದಿಂದ ಬಲ್ಲೆ. ಅವರಿಬ್ಬರೂ ಅದಮ್ಯ ಚೇತನಗಳು ಎಂದರು.

ಮಹಿಳೆಯರು ಟಿವಿ, ಧಾರಾವಾಹಿ, ಮೊಬೈಲ್​ನಲ್ಲೇ ಸಮಯ ಕಳೆಯುತ್ತ, ಮನೆಗೂ ಆಹಾರವನ್ನು ಹೊರಗಿನಿಂದ ತರಿಸುವ ಸ್ಥಿತಿ ಇಂದು ಅನೇಕ ಮನೆಗಳಲ್ಲಿದೆ. ಆದರೆ ತೇಜಸ್ವಿನಿ ಅನಂತಕುಮಾರ್ ಸ್ವತಃ ತ್ಯಾಗಮನೋಭಾವದಿಂದ ಸೇವೆಯಲ್ಲಿ ತೊಡಗುವುದಷ್ಟೆ ಅಲ್ಲದೆ, ಅನೇಕ ಸ್ವಯಂಸೇವಕರನ್ನೂ ಪ್ರೇರಣೆ ನೀಡಿ ತೊಡಗಿಸಿರುವುದು ಅತ್ಯಂತ ಸಂತಸದ ವಿಚಾರ. ಮಕ್ಕಳಿಗೆ ಶುದ್ಧ, ರುಚಿಕರ ಆಹಾರ ನೀಡುತ್ತಿದ್ದಾರೆ. ಮಹಿಳೆಯರಿಗೆ ಮಾತ್ರವಲ್ಲದೆ, ಎಲ್ಲರಿಗೂ ಮಾದರಿಯಾದ ಅವರ ಕಾರ್ಯವನ್ನು ಎಷ್ಟು ಶ್ಲಾಘಿಸಿದರೂ ಸಾಲದು ಎಂದು ಡಾ. ವಿಜಯ ಸಂಕೇಶ್ವರ ಅವರು ಹೇಳಿದರು.

ಅದಮ್ಯ ಚೇತನ ಮುಖ್ಯಸ್ಥೆ ಡಾ.ತೇಜಸ್ವಿನಿ ಅನಂತಕುಮಾರ್ ಮಾತನಾಡಿ, 1997ರಿಂದ ಅದಮ್ಯ ಚೇತನ ಆರಂಭವಾಗಿ ಶಾಲಾ ಮಕ್ಕಳಿಗೆ ಪಾಠ, ಆರೋಗ್ಯ ತಪಾಸಣೆ ನಡೆಸುತ್ತಿದ್ದೆವು. ಅಚಾನಕ್ಕಾಗಿ ಒದಗಿಬಂದ ಸನ್ನಿವೇಶದಲ್ಲಿ 2003ರಿಂದ ಶಾಲಾ ಬಿಸಿಯೂಟ ನೀಡಲು ಆರಂಭಿಸಿದೆವು. ಅನಂತಕುಮಾರ್ ದೂರದೃಷ್ಟಿ ಹಾಗೂ ಸ್ವಯಂಸೇವಕರ ಸೇವಾಮನೋಭಾವದಿಂದಾಗಿ ಇಂದು ಪ್ರತಿದಿನ 1.75 ಲಕ್ಷ ಊಟ ತಯಾರಿಸಿ ವಿತರಣೆ ಮಾಡಲಾಗುತ್ತಿದೆ. ಅದಮ್ಯ ಚೇತನ ಜತೆಗೆ ಇದೀಗ ಅನಂತ ಕುಮಾರ್ ಪ್ರತಿಷ್ಠಾನದಿಂದ ಜನಪ್ರತಿನಿಧಿಗಳಿಗೆ ನಾಯಕತ್ವ, ಆಡಳಿತ ತರಬೇತಿ ನೀಡಲು ಸಿದ್ಧತೆ ನಡೆಸಿದ್ದೇವೆ. ಪ್ರತಿಷ್ಠಾನದ ಗ್ರಾಮೀಣ ಕ್ಯಾಂಪಸ್ ಸದ್ಯದಲ್ಲೇ ಹುಬ್ಬಳ್ಳಿಯಲ್ಲಿ ಆರಂಭವಾಗಲಿದ್ದು, ಅದಕ್ಕೆ ಡಾ.ವಿಜಯ ಸಂಕೇಶ್ವರ ಅವರ ಮಾರ್ಗದರ್ಶನ ಅಗತ್ಯವಿದೆ ಎಂದು ಕೋರಿದರು.

ಅರ್ಧ ಪಾಲಿಷ್ ಅಕ್ಕಿ ಬಳಕೆಗೆ ಸಲಹೆ

ಪೂರ್ಣ ಪಾಲಿಷ್ ಆದ ಅಕ್ಕಿಯ ಬಳಕೆಗಿಂತಲೂ ಅರ್ಧ ಪಾಲಿಷ್ ಅಕ್ಕಿಯನ್ನು ಬಳಸುವಂತೆ ಡಾ.ವಿಜಯ ಸಂಕೇಶ್ವರ ಸಲಹೆ ನೀಡಿದರು. ಪೂರ್ಣ ಪಾಲಿಷ್ ಆದ ಅಕ್ಕಿಯಿಂದ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಅರ್ಧ ಪಾಲಿಷ್ ಆದ ಅಕ್ಕಿಯು ಆರೋಗ್ಯಕ್ಕೆ ಉತ್ತಮವಾಗಿರುತ್ತದೆ, ಮಕ್ಕಳಲ್ಲಿ ಆರೋಗ್ಯ ವೃದ್ಧಿಸುತ್ತದೆ ಎಂದರು. ಜತೆಗೆ ಅಡುಗೆ ಮನೆಯಲ್ಲಿ ತೊಗರಿ ಬೇಳೆ ಬೇಯಿಸುವಾಗ ಹೊರಬರುವ ನೊರೆ ಸಂಪೂರ್ಣವಾಗಿ ಅನಾರೋಗ್ಯಕರ ಹಾಗೂ ಆಸಿಡ್ ಅಂಶವಿರುತ್ತದೆ. ಹಿಂದಿನ ಕಾಲದಲ್ಲಿ ಅಡುಗೆ ಮಾಡುವಾಗ ಈ ನೊರೆಯನ್ನು ಹೊರ ತೆಗೆಯುತ್ತಿದ್ದರು. ಕುಕ್ಕರ್​ನಲ್ಲಿ ಬೇಯಿಸಿದಾಗ ಆಸಿಡ್ ಅಂಶಗಳು ಆಹಾರಕ್ಕೆ ಸೇರಿಕೊಳ್ಳುತ್ತವೆ. ಆರೋಗ್ಯದ ಕಾಳಜಿಯ ದೃಷ್ಟಿಯಿಂದ ಜಪಾನ್​ನಲ್ಲಿ ಕುಕ್ಕರ್ ಬಳಸಿ ಅಡುಗೆ ಮಾಡುವುದಿಲ್ಲ. ನಮ್ಮ ಮನೆಯಲ್ಲೂ ಅನೇಕ ವರ್ಷಗಳಿಂದ ಕುಕ್ಕರ್ ಬಳಸದೇ ಅಡುಗೆ ಮಾಡಲಾಗುತ್ತಿದೆ. ಅದಮ್ಯ ಚೇತನ ಸಂಸ್ಥೆಯಲ್ಲೂ ಈ ವಿಧಾನ ಅನುಸರಿಸಬಹುದು ಎಂದರು. ಎರಡೂ ಸಲಹೆಗಳನ್ನು ಸ್ವಾಗತಿಸಿದ ತೇಜಸ್ವಿನಿ ಅನಂತಕುಮಾರ್, ತೊಗರಿ ಬೇಳೆ ಬೇಯಿಸುವ ಸಂದರ್ಭ ನೊರೆ ಹೊರತೆಗೆಯುವಿಕೆಯನ್ನು ನಾಳೆಯಿಂದಲೇ ಅನುಸರಿಸುತ್ತೇವೆ. ಅರ್ಧ ಪಾಲಿಷ್ ಆಗಿರುವ ಅಕ್ಕಿ ಬಳಸುವ ಕುರಿತೂ ನಿರ್ಧಾರ ಮಾಡುತ್ತೇವೆ ಎಂದು ತಿಳಿಸಿದರು.

ಅದಮ್ಯ ಚೇತನಕ್ಕೆ 50 ಲಕ್ಷ ರೂ.

ಸೇವಾ ಮನೋಭಾವದಿಂದ ಆಹಾರ, ಆರೋಗ್ಯ ಮುಂತಾದ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅದಮ್ಯ ಚೇತನ ಸಂಸ್ಥೆಗೆ 50 ಲಕ್ಷ ರೂ. ದೇಣಿಗೆ ನೀಡುವುದಾಗಿ ಡಾ. ವಿಜಯ ಸಂಕೇಶ್ವರ ಅವರು ಘೋಷಿಸಿದರು. ಈ ಮೊತ್ತವು ಸಂಸ್ಥೆಯ ಕಾರ್ಯಚಟುವಟಿಕೆಗೆ ಅಗಾಧ ಬೆಂಬಲ ನೀಡುತ್ತದೆ ಎಂದು ಡಾ.ತೇಜಸ್ವಿನಿ ಅನಂತಕುಮಾರ್ ಧನ್ಯವಾದ ಅರ್ಪಿಸಿದರು.