ಕೋಟ: ಸಮಾಜದ ಒಳಿತಿಗಾಗಿ ಸಮಾಜಕ್ಕೊಸ್ಕರ ತಮ್ಮ ಜೀವನವನ್ನೆ ಮುಡಿಪಾಗಿಟ್ಟ ಆನಂದ್ ಸಿ.ಕುಂದರ್ ಕರಾವಳಿಯ ಕಲ್ಪತರು ಆಗಿದ್ದಾರೆ ಎಂದು ಉಡುಪಿಯ ಹೊಸಬದುಕು ಆಶ್ರಮದ ಮುಖ್ಯಸ್ಥ ಹ.ರಾ.ವಿನಯಚಂದ್ರ ಸಾಸ್ತಾನ ನುಡಿದರು.
ಶನಿವಾರ ಜನತಾ ಸಂಸ್ಥೆಯಲ್ಲಿ ಆನಂದ್ ಸಿ.ಕುಂದರ್ 77ನೇ ಜನ್ಮದಿನಾಚರಣೆ ಅಂಗವಾಗಿ ಗೀತಾನಂದ ಫೌಂಡೇಶನ್ ವತಿಯಿಂದ ವಿವಿಧ ಆಶ್ರಮಕ್ಕೆ, ಅಶಕ್ತರಿಗೆ, ಅನಾರೋಗ್ಯ ಪೀಡಿತರಿಗೆ 25 ಲಕ್ಷಕ್ಕೂ ಹೆಚ್ಚು ಧನಸಹಾಯದ ಚೆಕ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆನಂದ್ ಸಿ. ಕುಂದರ್ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಸಾಮಾಜಿಕ ಬದ್ಧತೆಯನ್ನು ಪ್ರದರ್ಶಿಸಿದ್ದು ಅತ್ಯಂತ ಶ್ಲಾಘನಾರ್ಹ ಕಾರ್ಯವಾಗಿದೆ ಎಂದರು.
ಉಡುಪಿಯ ಹೊಸಬದುಕು, ಬ್ರಹ್ಮಾವರದ ಅಪ್ಪ ಅಮ್ಮ ಆಶ್ರಮ, ಮಾನಸ ಜ್ಯೋತಿ ವಿಶೇಷಚೇತನ ಶಾಲೆ, ಬ್ರಹ್ಮಾವರದ ವಿಜಯ ಬಾಲನಿಕೇತನ ಸೇರಿದಂತೆ ಒಟ್ಟು 11 ಆಶ್ರಮ ಹಾಗೂ 15ಕ್ಕೂ ಅಧಿಕ ಅನಾರೋಗ್ಯ, ಆಶಕ್ತರಿಗೆ ನೆರವಿನ ಚೆಕ್‌ನ್ನು ಈ ಸಂದರ್ಭದಲ್ಲಿ ಹಸ್ತಾಂತರಿಸಲಾಯಿತು.
ಕಾರ್ಯಕ್ರಮದಲ್ಲಿ ಜನತಾ ಸಂಸ್ಥೆಯ ವ್ಯವಸ್ಥಾಪಕ ಶ್ರೀನಿವಾಸ ಕುಂದರ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಗೀತಾನಂದ ಫೌಂಡೇಶನ್ ಸಮಾಜಕಾರ್ಯ ವಿಭಾಗದ ರವಿಕಿರಣ್ ಕೋಟ ನಿರ್ವಹಿಸಿದರು.