ಜಿಲ್ಲೆ

'ಕರೊನಾ ಹರಡಿಸ್ತೀರಾ' ಎಂದು ನರ್ಸಿಂಗ್ ವಿದ್ಯಾರ್ಥಿನಿ ಮತ್ತು ಕುಟುಂಬದವರ ಮೇಲೆ ಹಲ್ಲೆ

Mandara

ಬೆಂಗಳೂರು: ಕರೊನಾ ಹರಡುತ್ತೀರಾ ಎಂದು ಆರೋಪಿಸಿ ನಸಿರ್ಂಗ್​ ವಿದ್ಯಾರ್ಥಿನಿ ಮತ್ತು ಆಕೆ ಕುಟುಂಬದವರ ಮೇಲೆ ಸ್ಥಳಿಯರು ಗಲಾಟೆ ಮಾಡಿ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಇಂದಿರಾನಗರದಲ್ಲಿ ನಡೆದಿದೆ.

ಲಕ್ಷ್ಮಿಪುರದ ನಿವಾಸಿ ಪ್ರಿಯದರ್ಶಿನಿ ಹಲ್ಲೆಗೆ ಒಳಗಾದವರು. ನೊಂದ ವಿದ್ಯಾರ್ಥಿನಿ ನೀಡಿದ ದೂರಿನ ಮೇರೆಗೆ ನೆರೆಹೊರೆಯ ನಿವಾಸಿಗಳಾದ ರಾಮ್​, ಪ್ರಭು ಹಾಗೂ ಅರ್ಜುನ್​ ವಿರುದ್ಧ ಎಫ್​ಐಆರ್​ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

"ಕೆಲ ತಿಂಗಳ ಹಿಂದೆ ನನ್ನ ತಾಯಿಗೆ ಕರೊನಾ ಸೋಂಕು ಬಂದು ಗುಣಮುಖರಾಗಿದ್ದಾರೆ. ಆದರೆ ಪದೇ ಪದೆ 'ನೀವು ಕರೊನಾ ಹರಡುತ್ತೀರಾ' ಎಂದು ಅಕ್ಕಪಕ್ಕ ಮನೆಯ ನಿವಾಸಿಗಳಾದ ರಾಮ್​, ಪ್ರಭು ಹಾಗೂ ಅರ್ಜುನ್​ ಜಗಳ ಮಾಡುತ್ತಿದ್ದರು. ಮೇ 14ರಂದು ಸಂಜೆ ನಮ್ಮ ಮನೆ ಹತ್ತಿರ ಬಂದು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದರು. ಇದನ್ನು ಪ್ರಶ್ನಿಸಿದ್ದಕ್ಕೆ ನನ್ನ ತಂದೆಗೆ ಹೊಡೆದು ದುಂಡಾವರ್ತನೆ ತೋರಿಸಿದ್ದರು. ಜಗಳ ಬಿಡಿಸಲು ತೆರಳಿದ ನನ್ನ ಕೈಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಿದ್ದಾರೆ" ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದಾರೆ. ಆರೋಪಿಗಳ ಪೈಕಿ ಒಬ್ಬನಿಗೆ ಕರೊನಾ ಸೋಂಕು ಪತ್ತೆಯಾಗಿದೆ. ಗುಣಮುಖನಾದ ನಂತರ ಮುಂದಿನ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.