ಬೆಂಗಳೂರು: ಈಗಂತೂ ಎಲ್ಲೆಡೆ ಅಂಬ್ಯುಲೆನ್ಸ್‌ಗೆ ಪರದಾಟ. ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಬೆನ್ನಲ್ಲೇ ಅಂಬ್ಯುಲೆನ್ಸ್ ಸೇವೆ ಸಿಗದೇ ಎಷ್ಟೋ ಸೋಂಕಿತರು ಪರದಾಡುವಂತಾಗಿದೆ.
ಸೂಕ್ತ ಸಮಯದಲ್ಲಿ ಅಂಬ್ಯುಲೆನ್ಸ್ ಸಿಗದೇ ಪ್ರಾಣ ಹೋಗಿರುವ ಘಟನೆಗಳೂ ನಡೆಯುತ್ತಲೇ ಇವೆ. ಅದೇ ಇನ್ನೊಂದೆಡೆ, ಕೆಲವು ಖಾಸಗಿ ಆಂಬುಲೆನ್ಸ್‌ನವರು ಕೆಲವೊಮ್ಮೆ ಆಸ್ಪತ್ರೆಗೆ ಬರಲು ನಿರಾಕರಿಸುತ್ತಾರೆ.
ಇಂಥ ಪರಿಸ್ಥಿತಿ ತಮಗೆ ಎದುರಾಗಬಾರದು ಎನ್ನುವ ಕಾರಣಕ್ಕೆ ಕನಕಪುರ ರಸ್ತೆ ಫ್ಲ್ಯಾಟ್ ಮತ್ತು ಲೇಔಟ್ ನಿವಾಸಿಗಳು ಒಳ್ಳೆಯ ಪ್ಲ್ಯಾನ್ ಮಾಡಿದ್ದು, ತಮಗಾಗಿಯೇ ಪ್ರತ್ಯೇಕ ಆಂಬ್ಯುಲೆನ್ಸ್ ಅನ್ನು 6 ತಿಂಗಳ ಅವಧಿಗೆ ಬಾಡಿಗೆ ಪಡೆದು ಕಾಯ್ದಿರಿಸಿಕೊಂಡಿದ್ದಾರೆ.
ಚೇಂಜ್ ಮೇಕರ್ಸ್ ಆಫ್ ಕನಕಪುರ ರೋಡ್ ಸಂಘಟನೆಯ ನೇತೃತ್ವದಲ್ಲಿ ನಿವಾಸಿಗಳು ಸುಸಜ್ಜಿತ ಆಂಬ್ಯುಲೆನ್ಸ್ ಬಾಡಿಗೆಗೆ ಪಡೆದಿದ್ದಾರೆ. 'ಕಳೆದ ತಿಂಗಳು ಇಲ್ಲಿ 90 ವರ್ಷದ ವ್ಯಕ್ತಿಯೊಬ್ಬರು ಅಸ್ವಸ್ಥರಾದರು. ಕರೆ ಮಾಡಿದಾಗ ಆಂಬ್ಯುಲೆಸ್ಸ್ ಬರಲು ಲೇಟಾಯಿತು. ಅಷ್ಟರಲ್ಲೇ ಅವರು ನಿಧನರಾದರು. ಇತ್ತೀಚೆಗೆ ಮತ್ತೊಬ್ಬರಿಗೆ ಹೃದಯಾಘಾತವಾದಾಗಲೂ ಇದೇ ಪರಿಸ್ಥಿತಿ ಸೃಷ್ಟಿಯಾಯಿತು. ಹೀಗಾಗಿ, ನಿವಾಸಿಗಳ ಬಳಕೆಗಾಗಿ ನಾವೇ ಪ್ರತ್ಯೇಕವಾಗಿ ಖಾಸಗಿ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿಕೊಂಡಿದ್ದೇವೆ' ಎನ್ನುತ್ತಾರೆ ಸ್ಥಳೀಯರು.
ಇದನ್ನೂ ಓದಿ: ಮಂಗಳನ ಅಂಗಳಕೆ ಹಾರಿತು ‘ಹೋಪ್’ ಗಗನನೌಕೆ
ಸುತ್ತಮುತ್ತಲಿನ ಕೆಲವು ನಿವಾಸಿಗಳ ಸಂಘಗಳು ಸೇರಿ 3,700 ಕುಟುಂಬಗಳು ಆಂಬ್ಯುಲೆನ್ಸ್ ಬಾಡಿಗೆಗೆ ಪಡೆದಿವೆ. ಖಾಸಗಿ ಕಂಪನಿಯೊಂದಕ್ಕೆ ತಿಂಗಳಿಗೆ 2 ಲಕ್ಷ ರೂ. ಬಾಡಿಗೆಯಂತೆ ಇದನ್ನು ಪಡೆಯಲಾಗಿದೆ. ಇದರಿಂದ ಒಬ್ಬರಿಗೆ ತಿಂಗಳಿಗೆ ಕೇವಲ 60 ರೂ. ಆಗುತ್ತದೆ. ಕನಕಪುರ ರಸ್ತೆಯಲ್ಲೇ ಆಂಬ್ಯುಲೆನ್ಸ್ ನಿಲ್ಲಿಸಿರುತ್ತೇವೆ. ವೈದ್ಯಕೀಯ ಅಗತ್ಯ ಇರುವವರು ಬಳಸಿಕೊಳ್ಳಬಹುದು. ಚಾಲಕ ಮತ್ತು ನರ್ಸ್ ಎಲ್ಲ ಸಂದರ್ಭದಲ್ಲೂ ಇರುತ್ತಾರೆ ಎನ್ನುವುದು ಅವರ ಮಾತು.
'ಆಂಬ್ಯುಲೆನ್ಸ್‌ನಲ್ಲಿ ವೆಂಟಿಲೇಟರ್, ಕಾರ್ಡಿಯಾಕ್ ಮಾನಿಟರ್, ಆಕ್ಸಿಜನ್ ಸಿಲಿಂಡರ್ ಮುಂತಾದ ಎಲ್ಲ ತುರ್ತು ವೈದ್ಯಕೀಯ ಸೌಲಭ್ಯಗಳೂ ಇವೆ. ಪಿಪಿಇ ಕಿಟ್ ಕೂಡ ಇದೆ. ಒಂದು ವೇಳೆ ಒಬ್ಬರಿಗಿಂತ ಹೆಚ್ಚು ಮಂದಿಗೆ ಏಕಕಾಲದಲ್ಲಿ ಆಂಬ್ಯುಲೆನ್ಸ್ ಅಗತ್ಯ ಕಂಡುಬಂದರೆ ಈ ಆಂಬ್ಯುಲೆನ್ಸ್ ಕಂಪನಿಯಿಂದಲೇ ಮತ್ತೊಂದು ಆ್ಯಂಬುಲೆಸ್ಸ್ ಒದಗಿಸಲಾಗುತ್ತದೆ.