ಚಿಕ್ಕಬಳ್ಳಾಪುರ: ಕೇಂದ್ರ ಗೃಹ ಸಚಿವ ಅಮಿತ್ ಷಾ ರಾಜ್ಯಕ್ಕೆ ಆಗಮಿಸಿ ಇಂದು ಮುದ್ದೇನಹಳ್ಳಿಯಲ್ಲಿ ಸತ್ಯಸಾಯಿ ಸಂಸ್ಥೆ ವತಿಯಿಂದ ನಿರ್ಮಿಸಲಾಗುತ್ತಿರುವ 400 ಹಾಸಿಗೆ ಸೌಲಭ್ಯವುಳ್ಳ ಉಚಿತ ಆಸ್ಪತ್ರೆಗೆ ಶಂಕು ಸ್ಥಾಪನೆ ಮಾಡಿದ್ದಲ್ಲದೆ, ಆರೋಗ್ಯ ಕ್ಷೇತ್ರದಲ್ಲಿ ರಾಷ್ಟ್ರ-ರಾಜ್ಯದ ಪಾತ್ರಗಳ ಕುರಿತು ಮಾತನಾಡಿದರು.
ಇದು ವಿಶ್ವೇಶ್ವರಯ್ಯ ಅವರ ಜನ್ಮಸ್ಥಳ, ಈ ಸ್ಥಳದಲ್ಲಿನ ಕಾರ್ಯಕ್ರಮದಲ್ಲಿ ಇರುವುದು ಸೌಭಾಗ್ಯ ಎಂದು ಅಮಿತ್ ಷಾ, ಸತ್ಯಸಾಯಿ ಟ್ರಸ್ಟ್ ಮಾಡುತ್ತಿರುವ ಸಮಾಜಮುಖಿ ಕಾರ್ಯಗಳಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಕೇಂದ್ರ ಸರ್ಕಾರದಿಂದ ಕೇವಲ ಏಳು ವರ್ಷಗಳಲ್ಲಿ 500ಕ್ಕೂ ಹೆಚ್ಚು ಮೆಡಿಕಲ್ ಕಾಲೇಜ್ ಪ್ರಾರಂಭ ಮಾಡಿದ್ದೇವೆ, 89 ಸಾವಿರಕ್ಕೂ ಹೆಚ್ಚು ಮೆಡಿಕಲ್ ವಿದ್ಯಾರ್ಥಿಗಳು ಪ್ರತಿವರ್ಷ ಅಧ್ಯಯನ ಮಾಡುತ್ತಾರೆ. ಬಹುದೊಡ್ಡ ಮೆಡಿಕಲ್ ಎಜುಕೇಷನ್ ಸೌಕರ್ಯ ಒದಗಿಸುವ ಕೆಲಸವನ್ನು ಮೋದಿ ಸರಕಾರ ಮಾಡಿದೆ ಎಂದ ಷಾ, ರಾಜ್ಯದಲ್ಲಿ ಕರೊನಾ ಪರಿಸ್ಥಿತಿ ನಿರ್ವಹಿಸಿದ್ದ ಬಗ್ಗೆಯೂ ಮಾತನಾಡಿದರು.
ಕರ್ನಾಟಕ ಸರ್ಕಾರ ಕರೊನಾದ ಮೂರೂ ಅಲೆಯಲ್ಲೂ ಸಮರ್ಥವಾಗಿ ಜವಾಬ್ದಾರಿ ನಿಭಾಯಿಸಿದೆ. ಕರೊನಾ ಪರಿಸ್ಥಿತಿ ನಿರ್ವಹಣೆ ಕುರಿತು ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ಅವರ ತ್ವರಿತ ಕೆಲಸದಿಂದ ಲಸಿಕೀಕರಣದಲ್ಲಿ ಸಾಧನೆ ಮಾಡಲು ಸಾಧ್ಯವಾಗಿದೆ ಎಂದರು.