ಜಿಲ್ಲೆ

ಅಮದಳ್ಳಿ ವೀರ ಗಣಪತಿ ದೇವರ ಬೆಳ್ಳಿ ಕವಚ ಕಳವು

Uttara Kannada - Subash Hegde

ಕಾರವಾರ: ಸುಪ್ರಸಿದ್ಧ ಅಮದಳ್ಳಿ ವೀರ ಗಣಪತಿ ದೇವರ ಬೆಳ್ಳಿಯ ಕವಚವನ್ನು ಕಳ್ಳರು ಕದ್ದೊಯ್ದಿದ್ದಾರೆ. ಭಾನುವಾರ ರಾತ್ರಿ 2 ಗಂಟೆಯ ಸುಮಾರಿಗೆ ದೇವಸ್ಥಾನದ ಹಿಂಬಾಗಿಲಿನಿಂದ ಬೀಗ ಒಡೆದು ನುಗ್ಗಿದ ಕಳ್ಳರು ಸುಮಾರು 5 ಬಾಗಿಲುಗಳನ್ನು ದಾಟಿ ಗರ್ಭಗುಡಿಯಲ್ಲಿ ದೇವರಿಗೆ ಹಾಕಿಟ್ಟಿದ್ದ ಸುಮಾರು 5 ಕಿಗ್ರಾಂ ತೂಕದ ಕವಚವನ್ನು ಕದ್ದು ಪರಾರಿಯಾಗಿದ್ದಾರೆ. ಅಲ್ಲದೇ, ದೇವಸ್ಥಾನದ ಹಿಂದೆ ಇದ್ದ ಮೀರಾ ರಮಾನಾಥ ಕಂತ್ರಿಕರ್ ಎಂಬುವವರ ಮನೆಯಲ್ಲಿ ಯಾರೂ ಇಲ್ಲದ್ದನ್ನು ನೋಡಿ ಅಲ್ಲಿಗೂ ನುಗ್ಗಿದ ಕಳ್ಳರು ಏಳು ಸಾವಿರ ರೂ. ನಗದನ್ನು ಕದ್ದು ಪರಾರಿಯಾಗಿದ್ದಾರೆ.
ದೇವಸ್ಥಾನದ ಮುಂಬಾಗಿಲಿನಲ್ಲಿ ಕಾವಲುಗಾರ ಮಲಗಿದ್ದಂತೆಯೇ ಘಟನೆ ನಡೆದಿದೆ. ಅಚ್ಚರಿ ಎಂದರೆ ಗರ್ಭಗುಡಿಯಲ್ಲಿದ್ದ ಇನ್ನೊಂದು ಬೆಳ್ಳಿಯ ಕವಚನ್ನು ಮುಟ್ಟಿಲ್ಲ. ಭಾನುವಾರ ಸಂಕಷ್ಟಿ ಇತ್ತು. ರಾತ್ರಿ ದೇವರಿಗೆ ಹಾಕಿದ್ದ ಬಂಗಾರದ ಆಭರಣಗಳನ್ನು ಹಾಗೂ ಹುಂಡಿಯಲ್ಲಿದ್ದ ಹಣವನ್ನು ತೆಗೆದು ಸುರಕ್ಷಿತವಾಗಿ ಇಟ್ಟಿದ್ದರಿಂದ ಅವ್ಯಾವವೂ ಕಳ್ಳರ ಪಾಲಾಗಿಲ್ಲ.
ಕಳ್ಳರ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ದಾಖಲಾಗಿವೆ. ಅವರು ಮುಖವನ್ನು ಟೋಪಿಯಿಂದ ಮುಚ್ಚಿಕೊಂಡು ಕಳ್ಳತನಕ್ಕೆ ಇಳಿದಿದ್ದಾರೆ. ಡಿವೈಎಸ್‌ಪಿ ಗಿರೀಶ ಎಸ್.ವಿ.ನೇತೃತ್ವದಲ್ಲಿ ಶ್ವಾನ ದಳ, ಬೆರಳಚ್ಚು ತಜ್ಞರು ಮಾಹಿತಿ ಕಲೆ ಹಾಕಿದ್ದಾರೆ. ಗ್ರಾಮೀಣ ಠಾಣೆಯಲ್ಲಿ ಅಮದಳ್ಳಿ ದೇವಸ್ಥಾನ ಕಮಿಟಿ ಕಾರ್ಯದರ್ಶಿ ವಿ.ಪಿ.ಗಾಂವಕರ್ ದೂರು ದಾಖಲಿಸಿದ್ದಾರೆ.