ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ಪ್ರತಿಯೊಬ್ಬರೂ ತಮ್ಮ ಜೀವನದ ಹಾದಿಯಲ್ಲಿ, ಪ್ರತಿ ಹಂತದ ಬೆಳವಣಿಗೆಯನ್ನು ದಾಖಲಿಸಿಡುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ತಿಳಿಸಿದರು.
ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಶುಕ್ರವಾರ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ಹೊರತಂದ ಆಳ್ವಾಸ್ ವೈಭವ ಅರ್ಪಣಾ ಗೀತೆಯ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಮ್ಮಿಂದ ಲಭಿಸಿದ ಚಿಕ್ಕ ಸಹಕಾರದ ಹೊರತಾಗಿಯೂ, ವಿದ್ಯಾರ್ಥಿಗಳ ಶ್ರಮದಿಂದ ಉತ್ತಮ ವಿಡಿಯೋ ಮೂಡಿಬಂದಿದೆ. ಈ ವಿಡಿಯೋದಲ್ಲಿ ಆಳ್ವಾಸ್‌ನ ಚಟುವಟಿಕೆಗಳನ್ನು ಸಣ್ಣ ತುಣುಕಿನ ಮೂಲಕ ತೋರಿಸುವ ಪ್ರಯತ್ನ ಶ್ಲಾಘನೀಯ ಎಂದರು.
ಸಾಹಿತ್ಯ, ಸಂಕಲನ ಹಾಗೂ ನಿರ್ದೇಶನ ಮಾಡಿದ ಸಂಕೇತ್ ಮುಳುಗುಂದ್ ತಮ್ಮ ಅನುಭವ ಹಂಚಿಕೊಂಡರು.
ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್, ಸಂಗೀತ ನಿರ್ದೇಶಕ ಗೌತಮ್ ಕೆ., ನಿರ್ದೇಶನ ವಿಭಾಗದ ದರ್ಶನ್, ಗೌತಮ್ ಕುಮಾರ್, ಸಾತ್ವಿಕ್, ಸಿನಿಮಾಟೋಗ್ರಾರ್ ವಿನೀತ್‌ರಾಜ್, ಗಾಯಕಿ ಆಶಿಕಾ ಆಚಾರ್ಯ ಉಪಸ್ಥಿತರಿದ್ದರು.
ಡಾ.ಯೋಗೀಶ್ ಕೈರೋಡಿ ಕಾರ್ಯಕ್ರಮ ನಿರೂಪಿಸಿದರು.