More

    ವಾಮಂಜೂರಲ್ಲಿ 11ರಿಂದ ಕೃಷಿ ಮೇಳ

    ಗುರುಪುರ: ವಾಮಂಜೂರು ತಿರುವೈಲಿನ ಶ್ರೀ ಅಮೃತೇಶ್ವರ ದೇವಸ್ಥಾನದ ಮುಂಭಾಗ ಮೇ 11ರಿಂದ 13ರ ವರೆಗೆ ಬೃಹತ್ ಕೃಷಿ ಮೇಳ ನಡೆಯಲಿದೆ.
    ವಾಮಂಜೂರಿನ ಶ್ರೀ ಅಮೃತೇಶ್ವರ ಯಕ್ಷಗಾನ ಪ್ರತಿಷ್ಠಾನದ ದಶಮ ಸಂಭ್ರಮ ಸವಿನೆನಪಿಗಾಗಿ ಶ್ರೀ ಅಮೃತೇಶ್ವರ ಯಕ್ಷಗಾನ ಪ್ರತಿಷ್ಠಾನ ಮತ್ತು ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘ ಜಂಟಿಯಾಗಿ ಆಯೋಜಿಸಿರುವ ಕೃಷಿ ಮೇಳಕ್ಕೆ ಮೂಡುಬಿದಿರೆ ಆಳ್ವಾಸ್ ಪ್ರತಿಷ್ಠಾನ, ದ.ಕ. ಜಿಲ್ಲಾ ಕೇಂದ್ರ ಸಹಕಾರಿ, ಸಾವಯವ ಕೃಷಿಕ ಗ್ರಾಹಕ ಬಳಗ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ದ.ಕ. ಮತ್ತು ನವೋದಯ ಸ್ವ-ಸಹಾಯ ಸಂಘ ಕೈಜೋಡಿಸಿದೆ.

    ಮಾಹಿತಿ ಕಾರ್ಯಾಗಾರ

    ಕೃಷಿ ವಸ್ತುಗಳ ಮಾರಾಟ ಮತ್ತು ಪ್ರದರ್ಶನ, ಮಾಹಿತಿ ಕಾರ್ಯಾಗಾರ ಆಯೋಜಿಸಲಾಗಿದೆ. ದಶಮ ಸಂಭ್ರಮದಲ್ಲಿ ಯಕ್ಷಗಾನಕ್ಕೆ ಸಂಬಂಧಿಸಿದ ವಿಷಯಗಳು ಒಳಗೊಂಡಿವೆ. ಆಹಾರ ಮೇಳ, ವಾಹನ ಮೇಳ, ಹಲಸು ಮೇಳ, ಜಾನುವಾರು ಮೇಳ, ಶ್ವಾನ ಪ್ರದರ್ಶನ, ದೇಸಿ ಗೋವು ತಳಿಗಳ ಪ್ರದರ್ಶನ, ಗೋವು ಉತ್ಪನ್ನಗಳ ಮಳಿಗೆ, ಬಾಳೆಹಣ್ಣು ಮೇಳ, ಹಣ್ಣುಹಂಪಲು ಪ್ರದರ್ಶನ, ಲಪುಷ್ಪ ಪ್ರದರ್ಶನ, ವ್ಯವಹಾರ ಮೇಳ, ಗುಡಿ ಕೈಗಾರಿಕೆ, ಆರ್ಟ್ ಗ್ಯಾಲರಿ, ವಸ್ತು ಪ್ರದರ್ಶನ, ಮನೋರಂಜನಾ ಆಟಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಜಾನಪದ ಆಟಗಳು, ಪಾರಂಪರಿಕ ಗ್ರಾಮ, ಸಂಗೀತ ರಸಸಂಜೆ, ತಾರಾಲಯ, ತಾಲೀಮು ಪ್ರದರ್ಶನ, ಹಗ್ಗ ಜಗ್ಗಾಟ, ಭಾರ ಎತ್ತುವ ಸ್ಪರ್ಧೆ, ದೇಹದಾರ್ಢ್ಯ ಪ್ರದರ್ಶನ, ಪುರುಷರ ಕಬಡ್ಡಿ, ಕುಸ್ತಿ ಪಂದ್ಯಾಟ, ಮಹಿಳೆಯರ ಕಬಡ್ಡಿ, ಕೃಷಿ ಮಾಹಿತಿ ಮತ್ತು ಚರ್ಚಾಗೋಷ್ಠಿ, ಕೃಷಿ ವಿಚಾರಗೋಷ್ಠಿ, ಯಕ್ಷಗಾನ ಸ್ಪರ್ಧೆ, ಯಕ್ಷ ಹಾಸ್ಯ ವೈಭವ, ಚಲನಚಿತ್ರ ನಟ-ನಟಿಯರ ಸಮಾಗಮ, ಅಂತಾರಾಷ್ಟ್ರೀಯ ಕ್ರೀಡಾಪಟುಗಳ ಸಮಾಗಮ, ಆರೋಗ್ಯ ತಪಾಸಣಾ ಶಿಬಿರ, ಜಾದೂ ಪ್ರದರ್ಶನ, ಮಿಮಿಕ್ರಿ, ‘ಬಲೆ ತೆಲಿಪುಗ’ ವೀಕ್ಷಕರಿಗೆ ಮುದ ನೀಡಲಿದೆ.

    ಕೃಷಿ ಮತ್ತು ಯಕ್ಷಗಾನ ಕ್ಷೇತ್ರದ ಸಾಧಕರು ಹಾಗೂ ಅತಿ ಹೆಚ್ಚು ಬಹುಮಾನ ಗಳಿಸಿದ ಕಂಬಳದ ಕೋಣಗಳಿಗೆ ಸನ್ಮಾನ, ಗೌರವ ಏರ್ಪಡಿಸಲಾಗಿದೆ. 11ರಂದು ಬೆಳಗ್ಗೆ 7:15ಕ್ಕೆ ಶ್ರೀ ಅಮೃತೇಶ್ವರ ಸಾನ್ನಿಧ್ಯದಲ್ಲಿ ಗೆಜ್ಜೆಪೂಜೆ, ಚೌಕಿಪೂಜೆ, ಶ್ರೀನಿವಾಸ ಬಳ್ಳಮಂಜ ಶಿಷ್ಯರಿಂದ ಯಕ್ಷ-ಗಾನ ವೈಭವ, ಕೃಷಿ ಮೇಳ ಉದ್ಘಾಟನೆ. ಶಾಸಕ ಡಾ.ಭರತ್ ಶೆಟ್ಟಿ, ಡಾ.ಎಂ. ಮೋಹನ್ ಆಳ್ವ, ಹೇಮಲತಾ ಆರ್. ಸಾಲ್ಯಾನ್, ಜಿ.ಆರ್.ಪ್ರಸಾದ್, ರಾಜಾರಾಮ್ ಭಟ್ ಮತ್ತು ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮಿ, ನರಸಿಂಹ ತಂತ್ರಿ, ಹರಿನಾರಾಯಣ ಆಸ್ರಣ್ಣ ಮತ್ತಿತರರು ಉಪಸ್ಥಿತರಿರುವರು. ಮಧ್ಯಾಹ್ನ ಆಳ್ವಾಸ್ ವಿದ್ಯಾರ್ಥಿಗಳಿಂದ ಹನುಮ ಒಡ್ಡೋಲಗ, ಜಿಲ್ಲೆಯ ಯಕ್ಷಗಾನ ಹಾಸ್ಯ ಕಲಾವಿದರಿಂದ ಯಕ್ಷಗಾನ ಹಾಸ್ಯವೈಭವ, ಶ್ರೀ ಅಮೃತೇಶ್ವರ ಯಕ್ಷಗಾನ ಪ್ರತಿಷ್ಠಾನ ವಿದ್ಯಾರ್ಥಿಗಳಿಂದ ‘ಮೇದಿನಿ ನಿರ್ಮಾಣ-ಮಹಿಷ ವಧೆ’ ಯಕ್ಷಗಾನ ಪ್ರದರ್ಶನ, ರಾತ್ರಿ 7ರಿಂದ ಸಭಾ ಕಾರ್ಯಕ್ರಮ, ಪ್ರತಿಷ್ಠಾನದ ವಿದ್ಯಾರ್ಥಿಗಳಿಂದ ಕದಂಬ ಕೌಶಿಕೆ ಯಕ್ಷಗಾನ ಪ್ರದರ್ಶನ. ಸಂಜೆ 3:30ರಿಂದ ಮತ್ತೊಂದು ವೇದಿಕೆಯಲ್ಲಿ ಕುಸ್ತಿ ಪಂದ್ಯಾಟ ನಡೆಯಲಿದೆ.

    12ರಂದು ಬೆಳಗ್ಗೆ 7:30ರಿಂದ ದ.ಕ., ಉಡುಪಿ ಮತ್ತು ಕಾಸರಗೋಡು ಜಿಲ್ಲೆಯ ಆಯ್ದ ಹವ್ಯಾಸಿ ಯಕ್ಷಗಾನ ತಂಡಗಳ ಯಕ್ಷಗಾನ ಸ್ಪರ್ಧೆ ನಡೆಯಲಿದೆ. ಗೌರವ ಸಮರ್ಪಣೆ, ರಾತ್ರಿ 7ಕ್ಕೆ ಸಭಾ ಕಾರ್ಯಕ್ರಮ. ಕೆ.ಡಿ.ಶೆಟ್ಟಿ(ಉದ್ಯಮ), ಮಂಜುನಾಥ ಭಂಡಾರಿ(ಧಾರ್ಮಿಕ ಮತ್ತು ಕೃಷಿ), ಸತ್ಯನಾರಾಯಣ ಹೊಳ್ಳ(ಹಿರಿಯ ನಾಗರಿಕರು), ರಘು ಸಾಲ್ಯಾನ್(ಸಮಾಜಸೇವೆ) ಮತ್ತು ಅಶ್ವಿನ್ ಶೆಟ್ಟಿ(ದೈವಾರಾಧನೆ ಮತ್ತು ಜಾನಪದ ಸಂಸ್ಕೃತಿ) ಅವರಿಗೆ ಸನ್ಮಾನ. ಅರೆಹೊಳೆ ಪ್ರತಿಷ್ಠಾನದಿಂದ ಸಾಂಸ್ಕೃತಿಕ ಕಾರ್ಯಕ್ರಮ. ಸಂಜೆ 3:30ರಿಂದ ಮಹಿಳೆಯರು ಮತ್ತು ಪುರುಷರ ಹಗ್ಗ ಜಗ್ಗಾಟ, ಭಾರ ಎತ್ತುವ ಸ್ಪರ್ಧೆ ನಡೆಯಲಿದೆ.

    13ರಂದು ಬೆಳಗ್ಗೆ 9.30ಕ್ಕೆ ಸಭಾ ಕಾರ್ಯಕ್ರಮ, ಡಾ.ಎಂ.ಮೋಹನ್ ಆಳ್ವ, ಶ್ರೀಕಾಂತ ಭಟ್, ಸತೀಶ್ಚಂದ್ರ ಸಾಲ್ಯಾನ್, ರವಿರಾಜ್ ರಾವ್, ರಘು ಅಡಪ ಮತ್ತು ಗೋಪಾಲಕೃಷ್ಣ ಭಂಡಾರಿ ಅವರಿಗೆ ಸನ್ಮಾನ. ಸಾಂಸ್ಕೃತಿಕ ವೈಭವ, ಬಲೆ ತೆಲಿಪುಲೆ, ಬೃಹತ್ ಗಾತ್ರದ ಕೋಳಿ ನೃತ್ಯ, ಜಾದೂ ಪ್ರದರ್ಶನ ನಡೆಯಲಿದೆ. ಸಂಜೆ 6ಕ್ಕೆ ಸಮಾರೋಪ ಸಮಾರಂಭ. ಡಾ.ಎಂ.ಎನ್.ರಾಜೇಂದ್ರ ಕುಮಾರ್, ಚಿತ್ತರಂಜನ್ ರೈ, ರೋಹನ್ ಮೊಂತೆರೊ, ಶಿವರಾಮ ಮಲ್ಲಿ ಮತ್ತು ಪದ್ಮನಾಭ ಕೋಟ್ಯಾನ್(ಬಿಎಲ್‌ಪಿ)ಗೆ ಸನ್ಮಾನ, ಬೆಳಗ್ಗೆ 11.30ರಿಂದ ಕೃಷಿ ವಿಚಾರಗೋಷ್ಠಿ, ಕೃಷಿ ಮಾಹಿತಿ, ರೈತರೊಂದಿಗೆ ಸಂವಾದ ಚರ್ಚಾಗೋಷ್ಠಿ ನಡೆಯಲಿದೆ. ಸಂಜೆ 3.30ರಿಂದ ಮಹಿಳೆಯರು, ಪುರುಷರ ಕಬಡ್ಡಿ ಸ್ಪರ್ಧೆ. ಕೃಷಿ ಕ್ಷೇತ್ರದಲ್ಲಿ ಸಾಧನೆಗೈದಿರುವ ಹಲವರಿಗೆ ಸನ್ಮಾನ. 7ರಿಂದ ಸಂಗೀತ ರಸಸಂಜೆ ಮತ್ತು ನೃತ್ಯ ವೈಭವ, ವಾಮಂಜೂರು ಜಂಕ್ಷನ್‌ನಿಂದ ಶ್ರೀ ಅಮೃತೇಶ್ವರ ದೇವಸ್ಥಾನವರೆಗೆ ಬಸ್ ವ್ಯವಸ್ಥೆಯಿದೆ.

    ಶ್ರೀ ಅಮೃತೇಶ್ವರ ಯಕ್ಷಗಾನ ಪ್ರತಿಷ್ಠಾನದ ದಶಮಾನೋತ್ಸವ ಜತೆಗೆ ಗುರುಪುರ ವ್ಯ.ಸೇ.ಸ.ಸಂಘವು ತಿರುವೈಲಿನಲ್ಲಿ ಬೃಹತ್ ಕೃಷಿ ಮೇಳ ಆಯೋಜಿಸುತ್ತಿದೆ. ಎಲ್ಲೆಡೆಯಿಂದ ಪೂರ್ಣ ಸಹಕಾರ ಲಭಿಸಿದೆ. ಸಂಘದ ವ್ಯಾಪ್ತಿಯ ರೈತರಿಗೆ ಪ್ರಯೋಜನವಾಗುವ ನಿಟ್ಟಿನಲ್ಲಿ ಕೃಷಿ ಮೇಳ ಆಯೋಜಿಸಲಾಗಿದೆ.
    – ಓಂ ಪ್ರಕಾಶ್ ಶೆಟ್ಟಿ, ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ

    ಯಕ್ಷಗಾನ ಪ್ರತಿಷ್ಠಾನ 2013ರಲ್ಲಿ ಪ್ರಾರಂಭವಾಗಿದೆ. ದಶಮ ಸಂಭ್ರಮದಲ್ಲಿ ಪ್ರತಿಷ್ಠಾನದ ಎಲ್ಲ ಯಕ್ಷಗಾನ ಕಲಿಕಾ ಮಕ್ಕಳಿಗೆ ವೇಷ ಕೊಡಲಾಗುವುದು. ದ.ಕ. ಉಡುಪಿ, ಕಾಸರಗೋಡು ಹವ್ಯಾಸಿ ಯಕ್ಷಗಾನ ಮಂಡಳಿಗಳ ಸ್ಪರ್ಧೆ ನಡೆಯಲಿದೆ.
    – ದೀಪಕ್ ಶೆಟ್ಟಿ ಲಿಂಗಮಾರುಗುತ್ತು, ಯಕ್ಷಗಾನ ಪ್ರತಿಷ್ಠಾನದ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts