ಜಿಲ್ಲೆ

ಅರ್ಕಾವತಿ ಸೈಟ್‌ದಾರರಿಗೆ ಬದಲಿ ನಿವೇಶನ ಹಂಚಿಕೆ; ಕೆಂಪೇಗೌಡ ಬಡಾವಣೆಯಲ್ಲಿ 378 ಮಂದಿಗೆ ಪರ್ಯಾಯ ವ್ಯವಸ್ಥೆ

ಬೆಂಗಳೂರು: ರೀಡೂ, ಡಿನೋಟಿಫಿಕೇಷನ್ ಸೇರಿದಂತೆ ವಿವಿಧ ಕಾರಣಗಳಿಂದ ಅರ್ಕಾವತಿ ಬಡಾವಣೆಯಲ್ಲಿ ನಿವೇಶನವನ್ನು ಕಳೆದುಕೊಂಡಿದ್ದ 378 ನಾಗರಿಕರಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಮೂಲಕ ರ‌್ಯಾಂಡಮೈಸೇಷನ್ ಬದಲಿ ಸೈಟ್‌ಗಳನ್ನು ವಿತರಿಸಲಾಯಿತು.

ಗುರುವಾರ ಬಿಡಿಎ ಕೇಂದ್ರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಮತ್ತು ಆಯುಕ್ತ ಜಿ.ಕುಮಾರ ನಾಯಕ್ ಸಮ್ಮುಖದಲ್ಲಿ ಸಾರ್ವಜನಿಕರಿಂದಲೇ ರ‌್ಯಾಂಡಮೈಸ್ ಪ್ರಕ್ರಿಯೆ ನಡೆಸಲಾಯಿತು.

20/30 ಚದರ ಅಡಿ ಅಳತೆಯ 232 ನಿವೇಶನಗಳು, 30/40 ಅಳತೆಯ 67, 40/60 ಅಳತೆಯ 34 ಹಾಗೂ 50/80 ಅಳತೆಯ 45 ನಿವೇಶನಗಳನ್ನು ರ‌್ಯಾಂಡಮೈಸ್ ಮಾಡುವ ಮೂಲಕ ಹಂಚಿಕೆದಾರರಿಗೆ ವಿತರಿಸಲಾಯಿತು.

ಈ ಕುರಿತು ಮಾತನಾಡಿದ ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್, ನಿವೇಶನ ಹಂಚಿಕೆದಾರರ ಸಂಕಷ್ಟವನ್ನು ಪರಿಹರಿಸುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿ ಕಳೆದ ವರ್ಷ ಸುಮಾರು 300 ನಿವೇಶನದಾರರಿಗೆ ಅರ್ಕಾವತಿಯಲ್ಲಿಯೇ ರಾಂಡಮೈಸ್ ಮೂಲಕ ಸೈಟ್ ಹಂಚಿಕೆ ಮಾಡಲಾಗಿತ್ತು. ಉಳಿದ ನಿವೇಶನ ಹಂಚಿಕೆದಾರರಿಗೆ ಅರ್ಕಾವತಿಯಲ್ಲಿ ಬದಲಿ ಸೈಟ್ ಗುರುತಿಸಿ ಹಂಚಿಕೆ ಮಾಡುವುದು ತಡವಾಗಿತ್ತು ಎಂದರು.

ಈ ಹಿನ್ನೆಲೆಯಲ್ಲಿ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಬದಲಿ ಸೈಟ್ ಪಡೆಯಲು ಆಸಕ್ತ ಹಂಚಿಕೆದಾರರಿಗೆ ಒಂದು ಅವಕಾಶ ನೀಡಲಾಗಿತ್ತು. ಅದರಂತೆ ಅರ್ಜಿ ಸಲ್ಲಿಸಿದ ಬಹುತೇಕ ಹಂಚಿಕೆದಾರರಿಗೆ ಕೆಂಪೇಗೌಡ ಬಡಾವಣೆಯಲ್ಲಿ ಬದಲಿ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಈ ರ‌್ಯಾಂಡಮೈಸೇಷನ್ ಪ್ರಕ್ರಿಯೆ ಸಂಪೂರ್ಣ ಪಾರದರ್ಶಕವಾಗಿ ನಡೆದಿದ್ದು, ಸಾರ್ವಜನಿಕರೇ ಕಂಪ್ಯೂಟರ್‌ನಲ್ಲಿ ಕ್ಲಿಕ್ ಮಾಡುವ ಮೂಲಕ ನಿವೇಶನವನ್ನು ಆಯ್ಕೆ ಮಾಡಲಾಯಿತು ಎಂದು ತಿಳಿಸಿದರು.

ಸದ್ಯದ ಪರಿಸ್ಥಿತಿಯಲ್ಲಿ ಅರ್ಕಾವತಿ ಬಡಾವಣೆಯಲ್ಲಿ ಬದಲಿ ಸೈಟ್‌ಗಳು ಲಭ್ಯವಾಗುವುದು ತಡವಾಗುತ್ತದೆ. ಈ ಹಿನ್ನೆಲೆಯಲ್ಲಿ ಆಸಕ್ತಿ ಇರುವ ನಿವೇಶನ ಹಂಚಿಕೆದಾರರು ಕೆಂಪೇಗೌಡ ಬಡಾವಣೆಯಲ್ಲಿ ಬದಲಿ ಸೈಟ್ ಬಯಸಿ ಅರ್ಜಿ ಸಲ್ಲಿಸಿದರೆ ಅವರಿಗೆ ನಿವೇಶನವನ್ನು ಹಂಚಿಕೆ ಮಾಡಲಾಗುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಬಿಡಿಎ ಕಾರ್ಯದರ್ಶಿ ಡಾ.ಶಾಂತರಾಜು, ಅಭಿಯಂತರ ಸದಸ್ಯ ಡಾ.ಎಚ್.ಆರ್.ಶಾಂತರಾಜಣ್ಣ ಮತ್ತು ಇತರ ಅಧಿಕಾರಿಗಳು ಇದ್ದರು.

ನಾನಾ ಕಾರಣಗಳಿಂದ ಅರ್ಕಾವತಿ ನಿವೇಶನ ಹಂಚಿಕೆದಾರರಿಗೆ ನಿವೇಶನವನ್ನು ನೀಡಲು ಸಾಧ್ಯವಾಗಿಲ್ಲ. ಕೆಂಪೇಗೌಡ ಬಡಾವಣೆಯಲ್ಲಿ ಬದಲಿ ನಿವೇಶನ ಬಯಸಿ ಅರ್ಜಿ ಸಲ್ಲಿಸಿದವರಿಗೆ ಪಾರದರ್ಶಕವಾಗಿ ಸಾರ್ವಜನಿಕರ ಸಮ್ಮುಖದಲ್ಲಿಯೇ ಹಂಚಿಕೆ ಮಾಡಲಾಗಿದೆ.| ಜಿ.ಕುಮಾರ ನಾಯಕ್, ಬಿಡಿಎ ಆಯುಕ್ತ ಅರ್ಕಾವತಿ ಬಡಾವಣೆಯಲ್ಲಿ ನಮಗೆ ಸೈಟ್ ಹಂಚಿಕೆಯಾಗಿದ್ದರೂ ಅದು ನಮ್ಮ ಕೈಗೆ ಬರಲಿಲ್ಲ. ನಿವೇಶನ ಪಡೆಯಲು ಹಲವು ವರ್ಷಗಳಿಂದ ಬಿಡಿಎಗೆ ಅಲೆದಾಡಿದರೂ ಬದಲಿ ಸೈಟ್ ಸಿಕ್ಕಿರಲಿಲ್ಲ. ಈಗ ಕೆಂಪೇಗೌಡ ಬಡಾವಣೆಯಲ್ಲಿ ನಮಗೆ ಬದಲಿ ನಿವೇಶನ ಹಂಚಿಕೆ ಮಾಡಿರುವುದು ಸಂತಸ ತಂದಿದೆ.| ಆಶಾ ರಾವ್, ರಾಂಡಮೈಸೇಷನ್‌ನಲ್ಲಿ ಬದಲಿ ಸೈಟ್ ಪಡೆದಾಕೆ