ಜಿಲ್ಲೆ

ಮದ್ಯಪಾನದಿಂದ ಬದ್ಧತೆಗೆ ಧಕ್ಕೆ : ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿಕೆ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಕೆಟ್ಟ ಅಭ್ಯಾಸಗಳು ಮನುಷ್ಯರನ್ನು ಸುಲಭವಾಗಿ ಹಿಡಿದುಕೊಳ್ಳುತ್ತವೆ. ಆದರೆ ಅದನ್ನು ಬಿಡಲು ಕಷ್ಟ ಪಡಬೇಕಾಗುತ್ತದೆ. ದುಶ್ಚಟವೆಂಬುದು ತಮ್ಮ ಅರಿವಿಲ್ಲದೆಯೇ ಪ್ರಾರಂಭ ಮಾಡುವುದಾಗಿದೆ. ಮದ್ಯಪಾನದ ವ್ಯಸನ ನಮ್ಮ ಬದ್ಧತೆ ಮತ್ತು ತೀರ್ಮಾನಗಳಲ್ಲಿ ದೋಷವುಂಟು ಮಾಡಿ ಮನಸ್ಸು ಮತ್ತು ಶರೀರಕ್ಕೆ ಅಪಾಯ ತಂದೊಡ್ಡುತ್ತದೆ. ಆದುದರಿಂದ ಮದ್ಯಪಾನವು ವಿಷ ಮತ್ತು ದೋಷಪೂರ್ಣವಾಗಿದೆ. ಇದನ್ನು ಪೂರ್ಣ ಪ್ರಮಾಣದಲ್ಲಿ ತ್ಯಜಿಸುವ ಸಂಕಲ್ಪ ಮಾಡಿಕೊಂಡು ಉತ್ತಮ ಭವಿಷ್ಯವನ್ನು ರೂಪಿಸಿ ಸಮಾಜದಲ್ಲಿ ಮಾದರಿಯಾಗಿ ಬದುಕಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಹೇಳಿದರು.

ಉಜಿರೆ ಲೈಾಲದಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರದಲ್ಲಿ ನಡೆದ 244ನೇ ವಿಶೇಷ ಮದ್ಯವರ್ಜನ ಶಿಬಿರದ ಶಿಬಿರಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಾ ಮಾತನಾಡಿದರು.

ವಿಶೇಷ 8 ದಿನದ ಶಿಬಿರದಲ್ಲಿ ರಾಜ್ಯಾದ್ಯಂತ 76 ಶಿಬಿರಾರ್ಥಿಗಳು ಭಾಗವಹಿಸಿದ್ದರು. ಜನಜಾಗೃತಿ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿ.ಪಾಸ್, ಯೋಜನಾಧಿಕಾರಿ ಮಾಧವಗೌಡ, ಶಿಬಿರಾಧಿಕಾರಿಗಳಾದ ನಾಗೇಂದ್ರ ಎಚ್.ಎಸ್., ದಿವಾಕರ್ ಪೂಜಾರಿ, ಆರೋಗ್ಯ ಸಹಾಯಕಿ ನೇತ್ರಾವತಿ, ಪ್ರೆಸಿಲ್ಲಾ ಡಿಸೋಜಾ ಆಪ್ತಸಲಹೆಗಾರ ಜಿ.ಆರ್.ಮಧುರವರು ಸಹಕರಿಸಿದರು. ಮುಂದಿನ ವಿಶೇಷ ಶಿಬಿರವು ಎ.7ರಂದು ನಡೆಯಲಿದೆ ಎಂದು ವೇದಿಕೆಯ ಪ್ರಕಟಣೆ ತಿಳಿಸಿದೆ.