ಉಪ್ಪಿನಂಗಡಿ: ಆಂಧ್ರಪ್ರದೇಶ ಮೂಲದ ಲಾರಿ ಚಾಲಕರೊಬ್ಬರು ಉಪ್ಪಿನಂಗಡಿ ಸಮೀಪದ ಪಂಜಳದಲ್ಲಿ ಅಸ್ವಸ್ಥಗೊಂಡು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಹೋದವರು ಅಲ್ಲಿ ಮೃತಪಟ್ಟಿದ್ದಾರೆ. ಆಂಧ್ರಪ್ರದೇಶದ ಕಡಪ ಜಿಲ್ಲೆ ನಿವಾಸಿ ರಾಜಶೇಖರ ನಾಯ್ಡು(49) ಮೃತಪಟ್ಟವರು. ಅವರು ಲಾರಿ ಚಾಲಕರಾಗಿದ್ದು ಅ.7ರಂದು ಲಾರಿಯಲ್ಲಿ ಚಾಲಕನಾಗಿ ಆಂಧ್ರಪ್ರದೇಶದಿಂದ ಮೂಡುಬಿದಿರೆಗೆ ಬಂದು ಲಾರಿಯಲ್ಲಿ ಮಣ್ಣು ಲೋಡು ಮಾಡಿಕೊಂಡು ವಾಪಸ್ ಹೋಗುತ್ತಿರುವಾಗ ಅ.9ರಂದು ತಡರಾತ್ರಿ ಉಪ್ಪಿನಂಗಡಿ ಗ್ರಾಮದ ಪಂಜಳ ಪೆಟ್ರೋಲ್ ಪಂಪ್ ಬಳಿ ತಲುಪಿದಾಗ ಲಾರಿ ರಸ್ತೆ ಬದಿಗೆ ಹೋಗಿ ನಿಂತಿತ್ತು. ಇದನ್ನು ಗಮನಿಸಿದ ಸ್ಥಳೀಯರು ವಿಚಾರಿಸಿದಾಗ ಚಾಲಕ ರಾಜಶೇಖರ ನಾಯ್ಡು ಅಸ್ವಸ್ಥಗೊಂಡಿದ್ದು, ಅವರನ್ನು ಉಪಚರಿಸಿ ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದರು. ರಾತ್ರಿ 1.30ರ ವೇಳೆಗೆ ಪುತ್ತೂರು ಸರ್ಕಾರಿ ಆಸ್ಪತ್ರೆಯ ವೈದ್ಯರು ಪರಿಶೀಲನೆ ನಡೆಸಿ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.