ಜಿಲ್ಲೆ

ಸಂಸದರಿಂದ ಸುಳ್ಯದಲ್ಲಿ ಅಹವಾಲು ಸ್ವೀಕಾರ : ಹರಿದು ಬಂದ ಮನವಿಗಳ ಮಹಾಪೂರ

ಸೌಮ್ಯ ಆರ್

ಸುಳ್ಯ: ನಗರದ ಪುರಭವನ ಅಭಿವೃದ್ಧಿ, ರಸ್ತೆಗಳ ಕಾಂಕ್ರೀಟೀಕರಣ, ಶಾಲೆಗೆ ಶೌಚಾಲಯ ನಿರ್ಮಾಣ, ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಹತ್ತು ಹಲವು ಸಮಸ್ಯೆಗಳ ನಿವಾರಣೆಗಾಗಿ ಮಂಗಳೂರು ಸಂಸದ ಬ್ರಿಜೇಶ್ ಚೌಟ ಮುಂದೆ ಮನವಿಗಳ ಮಹಾಪೂರವೇ ಹರಿದು ಬಂತು. ಸುಳ್ಯದ ನಿರೀಕ್ಷಣಾ ಮಂದಿರದಲ್ಲಿ ಶುಕ್ರವಾರ ಸಂಸದರು ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಮಾಡಿದರು.

ನಿವೃತ್ತ ಸೈನಿಕರ ಸಂಘದ ಪದಾಧಿಕಾರಿಗಳು ನಿವೇಶನಕ್ಕಾಗಿ ಸಂಬಂಧಪಟ್ಟ ಇಲಾಖೆಗೆ ನೀಡಿರುವ ಮನವಿ ಬಗ್ಗೆ ಹಾಗೂ ಅತಿ ಶೀಘ್ರದಲ್ಲಿ ಸ್ಪಂದನೆ ನೀಡುವಂತೆ ಸಂಸದರಲ್ಲಿ ಮನವಿ ಮಾಡಿದರು.

ಸುಳ್ಯ ಟೂರಿಸ್ಟ್ ಕಾರು ಮತ್ತು ವ್ಯಾನ್ ಚಾಲಕ-ಮಾಲೀಕ ಸಂಘದ ಪದಾಧಿಕಾರಿಗಳು ವೈಟ್‌ಬೋರ್ಡ್ ವಾಹನಗಳು ಬಾಡಿಗೆ ಮಾಡುವುದರಿಂದ ಸಮಸ್ಯೆ ಆಗಿದೆ. ಸಂಬಂಧಪಟ್ಟ ಅಧಿಕಾರಿಗಳ ಬಳಿ ದೂರಿಕೊಂಡರೆ ಯಾವುದೇ ಪ್ರಯೋಜನವಾಗುತ್ತಿಲ್ಲ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕೇಳಿಕೊಂಡರು.

ನಗರ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ನೀರಬಿದಿರೆ ಪುರಭವನ ಅಭಿವೃದ್ಧಿ ಹಾಗೂ ಸುಳ್ಯ ವಾರ್ಡ್‌ಗಳ ಅಭಿವೃದ್ಧಿಗೆ ಅನುದಾನಕ್ಕಾಗಿ ಮನವಿ ಮಾಡಿದರು. ಅರಂಬೂರು ಸರ್ಕಾರಿ ಶಾಲಾ ಸಮಿತಿ, ಶಾಲೆಯಲ್ಲಿ ಶೌಚಾಲಯ ನಿರ್ಮಾಣಕ್ಕೆ ಎಂಆರ್‌ಪಿಎಲ್ ಸಂಸ್ಥೆಗೆ ಶಿಪಾರಸ್ಸು ಪತ್ರ ನೀಡುವ ಬಗ್ಗೆ ಕೇಳಿಕೊಂಡರು. ಮಂಡೆಕೋಲು ನಿವಾಸಿಗಳು ಕೆಲವು ಪ್ರಮುಖ ರಸ್ತೆಗಳ ಕಾಂಕ್ರೀಟೀಕರಣದ ಜತೆಗೆ ಗ್ರಾಮಕ್ಕೆ ಕಾಡಾನೆಗಳ ಉಪಟಳದಿಂದ ಮುಕ್ತಿ ದೊರಕುವಂತೆ ಶಾಶ್ವತ ಪರಿಹಾರಕ್ಕಾಗಿ ಕೋರಿದರು. ಗಾಂಧಿನಗರ ಕೆಪಿಎಸ್ ಪ್ರೌಢಶಾಲಾ ವಿಭಾಗದವರು ಶಾಲೆಗೆ ಎಂಆರ್‌ಪಿಎಲ್ ವತಿಯಿಂದ ಸಭಾಂಗಣ ನಿರ್ಮಿಸಿ ಕೊಡುವಂತೆ ಮನವಿ ಮಾಡಿದರು.

ಸುಳ್ಯ ತಾಲೂಕಿನ ಕೂರ್ನಡ್ಕ ಮತ್ತು ಬಡ್ಡಡ್ಕದಲ್ಲಿ ಮೊಬೈಲ್ ಫೋನ್ ಸಂಪರ್ಕ ಕಲ್ಪಿಸಿಕೊಡಲು ಮೊಬೈಲ್ ಟವರ್ ಕಾಮಗಾರಿ ಪೂರ್ಣಮಾಡಿ ಕೊಡುವಂತೆ ಸ್ಥಳೀಯ ಬಿಜೆಪಿ ಬೂತ್ ಸಮಿತಿ ಪದಾಧಿಕಾರಿಗಳು ಸಂಸದರಿಗೆ ಮನವಿ ಪತ್ರ ನೀಡಿದರು. ದುಗ್ಗಲಡ್ಕ ಮತ್ತು ಕೊಯಿಕುಳಿ ಭಾಗಕ್ಕೆ ಕುಡಿಯುವ ನೀರಿನ ಯೋಜನೆ ಮಾಡಿಕೊಡುವಂತೆ ಸ್ಥಳೀಯ ನಿವಾಸಿ ಹೇಮಂತ್ ಕುಮಾರ್ ಕಂದಡ್ಕ ಮನವಿ ನೀಡಿದರು.

ಬಿಜೆಪಿ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ, ಮುಖಂಡರಾದ ಹರೀಶ್ ಕಂಜಿಪಿಲಿ, ವಿನಯ ಕುಮಾರ್ ಕಂದಡ್ಕ, ಸಂತೋಷ್ ಕುತ್ತಮೊಟ್ಟೆ, ಸುನಿಲ್ ಕೇರ್ಪಳ, ಹರೀಶ್ ಬೂಡುಪನ್ನೆ, ಸುಳ್ಯ ನಗರ ಮಹಾ ಶಕ್ತಿ ಕೇಂದ್ರ ಅಧ್ಯಕ್ಷ ಕುಸುಮಾಧರ, ಕಾರ್ಯದರ್ಶಿ ನಾರಾಯಣ ಶಾಂತಿನಗರ ಮೊದಲಾದವರು ಉಪಸ್ಥಿತರಿದ್ದರು.