ಲಿಂಗಸುಗೂರು ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಮುಂದೆ ಕರ್ನಾಟಕ ರಾಜ್ಯ ರೈತಸಂಘ ಮತ್ತು ಹಸಿರು ಸೇನೆ ಸಂಘಟನೆ ಮುಖಂಡರು ಪ್ರತಿಭಟನಾ ಧರಣಿ ನಡೆಸಿದರು. ತಾಲೂಕು ಅಧ್ಯಕ್ಷ ಶಿವಪುತ್ರಗೌಡ, ಮಸ್ಕಿ ತಾಲೂಕು ಕಾರ್ಯಾಧ್ಯಕ್ಷ ಶರಣಪ್ಪ ಕುಣಿಕಲ್ಲೂರು, ಮುಖಂಡರಾದ ಬಸವರಾಜ, ಹನುಮಂತ, ಮಲ್ಲಪ್ಪ, ಸಿದ್ಧಪ್ಪ, ಮಹ್ಮದ್ ಖಾಜಾಸಾಬ್ ಇತರರಿದ್ದರು. 
ಜಿಲ್ಲೆ

ಕೃಷಿ ಅಧಿಕಾರಿ ನೇಮಕಕ್ಕೆ ಆಗ್ರಹಿಸಿ ಧರಣಿ

ರುದ್ರಪ್ಪ ವಾಲಿ

ಲಿಂಗಸುಗೂರು: ಮಸ್ಕಿ ತಾಲೂಕಿನ ರೈತರಿಗೆ ಕೃಷಿ ಸಲಕರಣೆಗಳು ಸಮರ್ಪಕವಾಗಿ ಹಂಚಿಕೆಯಾಗುತ್ತಿಲ್ಲ. ಕೂಡಲೇ ಕೃಷಿ ಅಧಿಕಾರಿಯನ್ನು ನೇಮಕ ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ರೈತರು ಸ್ಥಳೀಯ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.

ಶೀಘ್ರ ಕೃಷಿ ಅಧಿಕಾರಿ ನೇಮಕ

ಮಸ್ಕಿ ತಾಲೂಕಿನಲ್ಲಿ ಕೃಷಿ ಇಲಾಖೆ ಅಧಿಕಾರಿಯಿಲ್ಲದೆ ಸಿಬ್ಬಂದಿಗಳು ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ ಸೇರಿ ಕೃಷಿ ಉಪಕರಣಗಳನ್ನು ಸರಿಯಾಗಿ ಹಂಚಿಕೆ ಮಾಡುತ್ತಿಲ್ಲ. ಕೃಷಿ ಅಧಿಕಾರಿ ನೇಮಕವಾಗುವವರೆಗೂ ಹಂಚಿಕೆ ಮಾಡುವುದಿಲ್ಲವೆಂದು ಹಾರಿಕೆ ಉತ್ತರ ನೀಡುತ್ತಿದ್ದು, ರೈತರಿಗೆ ಸೌಲಭ್ಯಗಳು ದೊರೆಯುತ್ತಿಲ್ಲ. ಡೆಮೊಗಾಗಿ ಬಂದಿರುವ ಶೇಂಗಾ, ಸಜ್ಜೆ, ತೊಗರಿ, ಸೂರ್ಯಕಾಂತಿ ಬೀಜಗಳನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಕೂಡಲೇ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಂಡು ಶೀಘ್ರ ಕೃಷಿ ಅಧಿಕಾರಿಯನ್ನು ನೇಮಕ ಮಾಡಬೇಕು ಎಂದು ಒತ್ತಾಯಿಸಿದರು.

ಧರಣಿ ಸ್ಥಳಕ್ಕೆ ಭೇಟಿ ನೀಡಿದ ಉಪಕೃಷಿ ನಿರ್ದೇಶಕಿ ಸರಸ್ವತಿ ಮನವಿ ಸ್ವೀಕರಿಸಿ, ಇಲಾಖೆಯಲ್ಲಿ ಅಧಿಕಾರಿ, ಸಿಬ್ಬಂದಿ ಕೊರತೆ ನೀಗಿಸಲು ಕ್ರಮ ಕೈಗೊಳ್ಳುವಂತೆ ಈಗಾಗಲೇ ಜಂಟಿ ಕೃಷಿ ನಿರ್ದೇಶಕರಿಗೆ ವರದಿ ನೀಡಿದ್ದು, ಬೇಡಿಕೆ ಬಗ್ಗೆ ಮತ್ತೊಮ್ಮೆ ಮೇಲಧಿಕಾರಿಗಳ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.


ರೈತಸಂಘದ ತಾಲೂಕು ಅಧ್ಯಕ್ಷ ಶಿವಪುತ್ರಗೌಡ, ಮಸ್ಕಿ ತಾಲೂಕು ಕಾರ್ಯಾಧ್ಯಕ್ಷ ಶರಣಪ್ಪ ಕುಣಿಕಲ್ಲೂರು, ಮುಖಂಡರಾದ ಬಸವರಾಜ, ಹನುಮಂತ, ಮಲ್ಲಪ್ಪ, ಸಿದ್ಧಪ್ಪ, ಮಹ್ಮದ್ ಖಾಜಾಸಾಬ್ ಇತರರಿದ್ದರು.