ಜಿಲ್ಲೆ

ಹುಲುಸಾಗಿ ಬೆಳೆದ ರಕ್ತಸಾಲಿ ಭತ್ತ ತಳಿ : ಪಂಜಾಬ್ ಮೂಲದ ಪ್ರಭೇದ

ಸೌಮ್ಯ ಆರ್

ಬೆಳ್ತಂಗಡಿ: ರಕ್ತಸಾಲಿ ಭತ್ತದ ತಳಿ ದ.ಕ.ಜಿಲ್ಲೆಯಲ್ಲೂ ಯಶಸ್ಸು ಕಂಡಿದ್ದು ಭತ್ತದ ಗದ್ದೆಗಳು ನಶಿಸುತ್ತಿರುವ, ಗದ್ದೆ ಕೃಷಿ ಮಾಡುವ ಬೆರಳೆಣಿಕೆಯ ರೈತರಿರುವ ಕಾಲದಲ್ಲಿ ಹೊಸ ತಳಿ ಬೆಳೆಸಿ, ಉಳಿಸುವ ಹುಮ್ಮಸ್ಸು ಕಂಡು ಬರುತ್ತಿರುವುದು ಉತ್ತಮ ವಿಚಾರ. ಕಳೆದ ಬಾರಿ ಪಂಜಾಬ್ ಮೂಲದ ಭತ್ತದ ತಳಿಯನ್ನು ಜಿಲ್ಲೆಗೆ ಪರಿಚಯಿಸಿದ ಸುಲ್ಕೇರಿ ಗ್ರಾಮದ ಕುಧ್ಯಾಡಿ ಮನೆಯ ಕೃಷಿಕ ಚಂದ್ರಕಾಂತ ಗೋರೆ, ಈ ಬಾರಿ ರಕ್ತಸಾಲಿ ಎಂಬ ವಿಶಿಷ್ಟ ಭತ್ತದ ತಳಿಯನ್ನು ಬೆಳೆಸಿದ್ದು ಅದು ಮುಂದಿನ ಕೆಲವೇ ದಿನಗಳಲ್ಲಿ ಕಟಾವಿಗೆ ಸಿದ್ಧವಾಗಿದೆ. ವೃತ್ತಿಯಲ್ಲಿ ಪುತ್ತೂರಿನ ಅಂಬಿಕಾ ಮಹಾವಿದ್ಯಾಲಯದಲ್ಲಿ ಮನಃಶಾಸ್ತ್ರ ಉಪನ್ಯಾಸಕರಾಗಿರುವ ಚಂದ್ರಕಾಂತ ಗೋರೆ ಮೂಲತಃ ಕೃಷಿಕರು. ಹಿರಿಯರು ಮಾಡುತ್ತಾ ಬಂದ ಬೇಸಾಯವನ್ನು ಮುಂದುವರಿಸಿರುವ ಇವರು ಊರಿನ ಮಸೂರಿ, ರಾಜಕಾಯಮೆ, ಗಂಧಸಾಲೆ, ಜೀರಿಸಾಲೆ ಅಲ್ಲದೆ ಇತರ ಊರುಗಳ ಚಂದ್ರಮುಖಿ, ಬಾಸ್ಮತಿ ಇತ್ಯಾದಿ ತಳಿಗಳನ್ನು ತಮ್ಮ ಗದ್ದೆಯಲ್ಲಿ ಬೆಳೆದು ಯಶ ಕಂಡವರು. ಗದ್ದೆಗೆ ದಶಕಗಳ ಹಿಂದೆ ಟ್ರಾೃಕ್ಟರ್, ಕಂಬೈನ್ಡ್ ಹಾರ್ವೆಸ್ಟರ್ ಇತ್ಯಾದಿ ಅತ್ಯಾಧುನಿಕ ಯಂತ್ರ ಊರಿನಲ್ಲಿ ಪರಿಚಯಿಸಿ ಕೃಷಿ ನಡೆಸುತ್ತಿರುವವರು. ಚಂದ್ರಕಾಂತ ಗೋರೆಯವರ ಭತ್ತದ ಕೃಷಿಯ ವೈಶಿಷ್ಟೃ ಬಗ್ಗೆ ಅರಿವಿದ್ದ ಶ್ರೀಪಡ್ರೆ ರಕ್ತಸಾಲಿ ತಳಿಯನ್ನು ಬೆಳೆಯಲು ಬೆಂಬಲ ನೀಡಿದ್ದು ಇದಕ್ಕೆ ಪೂರಕವಾಯಿತು. ಶ್ರೀಪಡ್ರೆ, ಭತ್ತದ ಬೆಳೆಗೆ ಪದ್ಮಶ್ರೀ ಪ್ರಶಸ್ತಿ ಪಡೆದ ಸತ್ಯನಾರಾಯಣ ಬೇಲೇರಿ ಅವರ ಪರಿಚಯ ಮಾಡಿಸಿಕೊಟ್ಟಿದ್ದು ಬೇಲೇರಿ ಅವರನ್ನು ಸಂಪರ್ಕಿಸಿ ಅವರ ಮೂಲಕ ಕೇರಳದ ವಯನಾಡಿನಿಂದ ಭತ್ತದ ಬೀಜಗಳನ್ನು ತರಿಸಿ ಬೆಳೆಸಲಾಗಿದೆ. ಕೆ.ಜಿ.ಗೆ 400 ರೂ.ವರೆಗೆ ದರ ರಕ್ತಸಾಲಿ ತಳಿ ಅಕ್ಕಿಗೆ ಕೆಜಿಗೆ 400 ರೂ. ಬೆಲೆ ಇದೆ. ಇದು ದೇಹದ ಹಿಮೋಗ್ಲೋಬಿನ್ ಅಂಶವನ್ನು ಉತ್ತಮಪಡಿಸುವ, ರೋಗ ನಿರೋಧಕವಾಗಿ ಕೆಲಸ ಮಾಡುವ, ಕ್ಯಾನ್ಸರ್‌ನಂತಹ ಕಾಯಿಲೆ ಕೂಡ ನಿಯಂತ್ರಣಕ್ಕೆ ತರುವಷ್ಟು ಶಕ್ತಿಯನ್ನು ಹೊಂದಿದೆ. ಇದೀಗ ಈ ತಳಿಯ ಭತ್ತ ಹುಲುಸಾಗಿ ಬೆಳೆದಿದ್ದು ಉತ್ತಮ ಫಸಲಿನ ನಿರೀಕ್ಷೆ ಇದೆ.

ದ.ಕ. ಜಿಲ್ಲೆಯ ಇತಿಹಾಸದಲ್ಲಿ ಭತ್ತದ ಬೇಸಾಯಕ್ಕೆ ಅದರದೇ ಆದ ಮಹತ್ವ ಇದೆ. ಹಿರಿಯರು ಉಳಿಸಿ, ಬೆಳೆಸಿದ ಗದ್ದೆಗಳಲ್ಲಿ ಇತರ ವಾಣಿಜ್ಯ ಕೃಷಿಗಳನ್ನು ಮಾಡದೆ ಈಗಲೂ ಪ್ರತಿ ವರ್ಷ ಹೊಸ-ಹೊಸ ತಳಿಯ ಭತ್ತಗಳನ್ನು ಬೆಳೆಸುವ ಪ್ರಯೋಗ ನಡೆಸುತ್ತಿದ್ದೇನೆ. ಇದಕ್ಕೆ ಉತ್ತಮ ಪ್ರತಿಫಲವೂ ಸಿಗುತ್ತಿದೆ. ಚಂದ್ರಕಾಂತ ಗೋರೆ, ಕೃಷಿಕ, ಸುಲ್ಕೇರಿ