ಜಿಲ್ಲೆ

ಉದ್ಯಮ ಕ್ಷೇತ್ರದ ಆವಿಷ್ಕಾರಗಳಿಗಾಗಿ ಒಪ್ಪಂದ

ಶಿರ್ವ: ಸಂಶೋಧನೆ ಹಾಗೂ ಉದ್ಯಮ ಕ್ಷೇತ್ರದಲ್ಲಿ ನೂತನ ಆವಿಷ್ಕಾರಗಳ ಉತ್ತೇಜನ, ವಿದ್ಯಾರ್ಥಿಗಳಿಗೆ ಉದ್ಯಮಶೀಲತೆ ತಿಳಿವಳಿಕೆ ಮೂಡಿಸುವ ನಿಟ್ಟಿನಲ್ಲಿ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯ ಹಾಗೂ ಮಂಗಳೂರಿನ ಕೆನರಾ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ನಡುವೆ ಒಡಂಬಡಿಕೆ ಮಾಡಿಕೊಳ್ಳಲಾಯಿತು.

ಸೋದೆ ವಾದಿರಾಜ ಮಠ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ರಾಧಾಕೃಷ್ಣ ಐತಾಳ್, ಕೆನರಾ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಅಧ್ಯಕ್ಷ ಆನಂದ್ ಜಿ.ಪೈ ಮತ್ತು ಸಂಸ್ಥೆಯ ಪ್ರಾಂಶುಪಾಲ ಡಾ.ತಿರುಮಲೇಶ್ವರ ಭಟ್ ಒಪ್ಪಂದಕ್ಕೆ ಸಹಿ ಹಾಕಿದರು. ಶೈಕ್ಷಣಿಕ ಸಂಸ್ಥೆಗಳು ಮತ್ತು ಕೈಗಾರಿಕೆಗಳ ನಡುವಿನ ಸಂಪರ್ಕ ಬಲಪಡಿಸುವ ಕುರಿತು ಪ್ರತಿಪಾದಿಸಲಾಯಿತು.

ಸೋದೆ ವಾದಿರಾಜ ಮಠ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಾಹಣಾಅಧಿಕಾರಿ ಡಾ.ರಾಧಾಕೃಷ್ಣ ಐತಾಳ್ ಮಾತನಾಡಿ, ಇಂತಹ ಒಪ್ಪಂದಗಳು ವಿದ್ಯಾರ್ಥಿಗಳನ್ನು ಉದ್ಯಮಿಗಳನ್ನಾಗಿ ಸಿದ್ಧಗೊಳಿಸಲು ಸಹಾಯವಾಗುತ್ತದೆ ಎಂದರು.

ಕೆನರಾ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಅಧ್ಯಕ್ಷ ಆನಂದ್ ಜಿ.ಪೈ ಮಾತನಾಡಿ, ಆರ್ಥಿಕ ಅಭಿವೃದ್ಧಿ ಉತ್ತೇಜಿಸುವುದು, ವ್ಯಾಪಾರ ಮತ್ತು ವ್ಯಾಪಾರ ಸಮುದಾಯದ ಹಿತಾಸಕ್ತಿ ಪ್ರತಿನಿಧಿಸುವುದು ತಮ್ಮ ಕೈಗಾರಿಕಾ ಸಂಸ್ಥೆಯ ಧ್ಯೇಯವಾಗಿದೆ ಎಂದರು.