ಜಿಲ್ಲೆ

ಆದಿತ್ಯ ರಂಜನ್, ಆರುಷಿ ಸೆವೆರಿನ್ ಚೆಸ್ ಚಾಂಪಿಯನ್

ಇಂದಿರಾ ಎನ್ ಕೆ

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ

ಕಾಪುವಿನಲ್ಲಿ ನಡೆದ 15 ವರ್ಷದೊಳಗಿನವರ ಫಿಡೆ ರೇಟೆಡ್ ರಾಜ್ಯ ಚೆಸ್ ಚಾಂಪಿಯನ್‌ಷಿಪ್‌ನ ಮುಕ್ತ ವಿಭಾಗದಲ್ಲಿ ಬೆಂಗಳೂರಿನ ಆದಿತ್ಯ ರಂಜನ್ ಸಾಹು ಮತ್ತು ಬಾಲಕಿಯರ ವಿಭಾಗದಲ್ಲಿ ಮಂಗಳೂರಿನ ಆರುಷಿ ಸೆವೆರಿನ್ ಹಲೆನ್ ಡಿಸಿಲ್ವ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

ಅಖಿಲ ಭಾರತ ಚೆಸ್ ಫೆಡರೇಷನ್, ಕರ್ನಾಟಕ ರಾಜ್ಯ ಚೆಸ್ ಸಂಸ್ಥೆ ಮತ್ತು ಉಡುಪಿ ಜಿಲ್ಲಾ ಚೆಸ್ ಸಂಸ್ಥೆಯ ಸಹಯೋಗದಲ್ಲಿ ಶ್ರೀ ನಾರಾಯಣಗುರು ಸ್ಕೂಲ್ ಅಫ್ ಚೆಸ್ ಆಯೋಜಿಸಿದ್ದ ಚಾಂಪಿಯನ್‌ಷಿಪ್‌ನಲ್ಲಿ ಆದಿತ್ಯ ರಂಜನ್ 7.5 ಪಾಯಿಂಟ್ ಹಾಗೂ ಆರುಷಿ 8.5 ಪಾಯಿಂಟ್ ಕಲೆ ಹಾಕಿದರು. ಇಬ್ಬರೂ ತಲಾ 6 ಸಾವಿರ ರೂ. ನಗದು ಮತ್ತು ಟ್ರೋಫಿ ಪಡೆದುಕೊಂಡರು.

ಮುಕ್ತ ವಿಭಾಗದಲ್ಲಿ ಬೆಂಗಳೂರಿನ ಅಜಯ್ ಹಿಪ್ಪರಗಿ ಮತ್ತು ಯುವನೇಶ್ ಎ. ಕೂಡ 7.5 ಪಾಯಿಂಟ್ ಗಳಿಸಿದ್ದರು. ಉತ್ತಮ ಟೈ ಬ್ರೇಕರ್ ಆಧಾರದಲ್ಲಿ ಆದಿತ್ಯ ಅವರನ್ನು ಚಾಂಪಿಯನ್ ಎಂದು ಘೋಷಿಸಲಾಯಿತು. ಅಜಯ್ ಮತ್ತು ಯುವನೇಶ್ ಕ್ರಮವಾಗಿ 2 ಮತ್ತು 3ನೇ ಸ್ಥಾನದೊಂದಿಗೆ 4 ಸಾವಿರ ಮತ್ತು 3 ಸಾವಿರ ರೂ. ನಗದು ಪಡೆದುಕೊಂಡರು. ಬೆಂಗಳೂರಿನ ವಿಹಾನ್ ಸಬ್‌ದೇವ್, ಮೈಸೂರಿನ ನಿವಾನ್ ರಾಘವೇಂದ್ರ, ಬೆಂಗಳೂರಿನ ಪ್ರಥಮೇಶ್ ಶಶಿಕಾಂತ್ ದೇಶ್‌ಮುಖ್, ಮೈಸೂರಿನ ಈಶ್ವರ್ ವೀರಪ್ಪನ್ನ ಆಯ್ಕೆಪ್ಪನ್, ದಕ್ಷಿಣ ಕನ್ನಡದ ಆರಾಧ ಭಟ್ಟಾಚಾರ್ಯ ಹಾಗೂ ಬೆಂಗಳೂರಿನ ಅದ್ರಿತ್ ದಾಸ್ ತಲಾ 7 ಪಾಯಿಂಟ್ ಗಳಿಸಿ, ಕ್ರಮವಾಗಿ 4ರಿಂದ 9ರ ವರೆಗಿನ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

ಬಾಲಕಿಯರ ವಿಭಾಗದ ಫಲಿತಾಂಶ: ಬಾಲಕಿಯರ ವಿಭಾಗದಲ್ಲಿ ಆರುಷಿ 8.5 ಪಾಯಿಂಟ್ ಗಳಿಸಿದ ಏಕೈಕ ಆಟಗಾರ್ತಿ ಎನಿಸಿದರೆ, ಉತ್ತರ ಕನ್ನಡದ ಅಕ್ಷಯ ಸಾಧಿ 7.5 ಪಾಯಿಂಟ್‌ಗಳೊಂದಿಗೆ ರನ್ನರ್ ಅಪ್ ಆಗಿ 4 ಸಾವಿರ ರೂ. ನಗದು ಬಹುಮಾನ ಪಡೆದರು. ಬೆಂಗಳೂರಿನ ಪ್ರತೀತಿ ಬೊರ್ಡೋಲಿ ಮತ್ತು ಶ್ರೇಯಾ ರಾಜೇಶ್ ತಲಾ 7 ಪಾಯಿಂಟ್ ಗಳಿಸಿದರು. ಉತ್ತಮ ಟೈಬ್ರೇಕರ್ ಆಧಾರದಲ್ಲಿ ಪ್ರತೀತಿ 3ನೇ ಮತ್ತು ಶ್ರೇಯಾ 4ನೇ ಸ್ಥಾನ ಗಳಿಸಿದರು. ಇವರಿಗೆ ಕ್ರಮವಾಗಿ 3 ಸಾವಿರ ಮತ್ತು 2.5 ಸಾವಿರ ರೂ. ನಗದು ನೀಡಲಾಯಿತು. ಬೆಂಗಳೂರಿನ ಕೃಪಾ ಉಕ್ಕಲಿ, ಇಂದುಶೀತಲ, ಉತ್ತರ ಕನ್ನಡದ ಅನ್ವಿತಾ ಸಾಥಿ, ಬೆಂಗಳೂರಿನ ಧನುಷ್ಯಾ, ದಿವ್ಯಶ್ರೀ ಮತ್ತು ನ್ಯಾನ್ಸಿ ತಲಾ 6.5 ಪಾಯಿಂಟ್‌ಗಳೊಂದಿಗೆ ಕ್ರಮವಾಗಿ 5ರಿಂದ 10ರ ವರೆಗಿನ ಸ್ಥಾನ ಗಳಿಸಿದರು.

ಬಹುಮಾನ ವಿತರಣಾ ಕರ್ಯಕ್ರಮದಲ್ಲಿ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಬ್ರಹ್ಮಾನಂದ ಭಟ್, ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ನಾಗೇಶ ಕಾರಂತ್ ಪಾಂಗಳ, ಬಾಬು ಜೆ.ಪೂಜಾರಿ, ಸುನೀಲ್ ಪೂಜಾರಿ ಕಾಪು, ರಾಕೇಶ್ ಕುಂಜೂರು. ಉಮಾನಾಥ ಕಾಪು, ಸಾಕ್ಷಾತ್ ಯು.ಕೆ., ಸೌಂದರ್ಯ ಯು.ಕೆ.ಉಪಸ್ಥಿತರಿದ್ದರು.