ವಿಜಯಪುರ ಜಿಲ್ಲಾಡಳಿತಕ್ಕೆ ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್ ಪಾರ್ಟಿ) ಪಕ್ಷದ ಕಾರ್ಯಕರ್ತರು ಮನವಿ ಸಲ್ಲಿಸಿದರು. ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವಾನಂದ ಯಡಹಳ್ಳಿ, ರಾಕೇಶ ಇಂಗಳಗಿ, ಪ್ರವೀಣ ಕನಸೆ ಇದ್ದಾರೆ. 
ಜಿಲ್ಲೆ

ಗಣಿ-ಭೂವಿಜ್ಞಾನ ಅಧಿಕಾರಿ ಮೇಲೆ ಕ್ರಮವಾಗಲಿ

ವಿಜಯಪುರ: ಅಕ್ರಮ ಮರಳು ಗಣಿಗಾರಿಕೆ ತಡೆಯುವಲ್ಲಿ ವಿಫಲರಾಗುತ್ತಿರುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್ ಪಾರ್ಟಿ) ಪಕ್ಷದ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವಾನಂದ ಯಡಹಳ್ಳಿ ಮಾತನಾಡಿ, ಜಿಲ್ಲೆಯಲ್ಲಿ ಅಕ್ರಮ ಮರಳು ಗಣಿಗಾರಿಕೆ ಅವ್ಯಾಹತವಾಗಿದೆ. ಈಗಾಗಲೇ ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೂ ತರಲಾಗಿದೆ.

ಸಾಕಷ್ಟು ಬಾರಿ ಹೋರಾಟ ಮಾಡಲಾಗಿದೆ. ಆದರೂ ಅಧಿಕಾರಿಗಳು ಅಕ್ರಮಕ್ಕೆ ಕಡಿವಾಣ ಹಾಕದೇ ಇರುವುದು ಶಂಕೆ ಮೂಡಿಸಿದೆ.

ದೇವರಹಿಪ್ಪರಗಿ ಭಾಗದಲ್ಲಿ ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಈ ಹಿಂದೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಆದರೂ, ಎಚ್ಚೆತ್ತುಕೊಳ್ಳದ ಅಧಿಕಾರಿಗಳು ಪರೋಕ್ಷವಾಗಿ ಈ ದಂಧೆಗೆ ಕುಮ್ಮಕ್ಕು ನೀಡುತ್ತಿದ್ದಾರೆನ್ನಿಸುತ್ತಿದೆ.

ಅಲ್ಲದೇ, ಪೊಲೀಸ್ ಅಧಿಕಾರಿಗಳು ಕೂಡ ಇದರಲ್ಲಿ ಶಾಮೀಲಾಗಿರುವುದು ನಾಚಿಕೆಗೇಡಿನ ಸಂಗತಿ. ಇನ್ನಾದರೂ ಹಿರಿಯ ಅಧಿಕಾರಿಗಳು ಅಕ್ರಮ ಮರಳು ಗಣಿಗಾರಿಕೆಗೆ ಕಡಿವಾಣ ಹಾಕಬೇಕು.

ಜೊತೆಗೆ ಸಂಬಂಧಿಸಿದ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ವಿಧಾನಸೌಧದ ಎದುರು ಧರಣಿ ನಡೆಸಲಾಗುವುದು ಎಂದರು.
ಪಕ್ಷದ ಪದಾಧಿಕಾರಿಗಳಾದ ರಾಕೇಶ ಇಂಗಳಗಿ, ಪ್ರವೀಣ ಕನಸೆ, ಹಮೀದ ಇನಾಮದಾರ ಮತ್ತಿತರರಿದ್ದರು.