ಅಕ್ರಮ ಮದ್ಯ, ಮರಳು ದಂಧೆಕೋರರ ವಿರುದ್ಧ ಕ್ರಮಕ್ಕೆ ಆಗ್ರಹ

Demand action against illegal liquor and sand smugglers
ಮುದ್ದೇಬಿಹಾಳ ತಾಲೂಕಿನಲ್ಲಿ ಅಕ್ರಮ ಮದ್ಯ ಮಾರಾಟ, ಮರಳು ದಂಧೆಕೋರರ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಿಸಿ ಜೆಡಿಎಸ್ ಕಾರ್ಯಕರ್ತರು ಪ್ರಭಾರಿ ತಹಸೀಲ್ದಾರ್ ಸಿ.ಎ. ಗುಡದಿನ್ನಿ ಅವರಿಗೆ ಮನವಿ ಸಲ್ಲಿಸಿದರು. ಅರವಿಂದ ಕಾಸಿನಕುಂಟಿ, ಎನ್.ಎಸ್. ಜಾಧವ, ಅನೀಲ ವಡ್ಡರ ಇತರರಿದ್ದರು.
Published on

ಮುದ್ದೇಬಿಹಾಳ: ತಾಲೂಕಿನಾದ್ಯಂತ ಅಕ್ರಮ ಮದ್ಯ ಹಾಗೂ ಮರಳು ದಂಧೆ ನಡೆದಿದ್ದು ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಿಸಿ ಶುಕ್ರವಾರ ತಹಸೀಲ್ದಾರರಿಗೆ ಜೆಡಿಎಸ್ ಕಾರ್ಯಕರ್ತರು ಮನವಿ ಪತ್ರ ಸಲ್ಲಿಸಿದರು.

ಪಟ್ಟಣದಲ್ಲಿರುವ ತಹಸೀಲ್ದಾರ್ ಕಚೇರಿಗೆ ಆಗಮಿಸಿದ ಜೆಡಿಎಸ್ ಕಾರ್ಯಕರ್ತರು, ಮುಖಂಡರು ಕಾಂಗ್ರೆಸ್ ಸರ್ಕಾರ ಹಾಗೂ ಅಕ್ರಮ ದಂಧೆಕೋರರ ವಿರುದ್ಧ ಘೋಷಣೆ ಕೂಗಿದರು.

ಜೆಡಿಎಸ್ ಯುವ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವರಾಜ ಭಜಂತ್ರಿ ಮಾತನಾಡಿ, ತಾಲೂಕಿನಲ್ಲಿ ಅಕ್ರಮ ಮರಳು ಸಾಗಣೆ ಹಾಗೂ ಅಕ್ರಮ ಮದ್ಯ ಮಾರಾಟದ ದಂಧೆ ನಡೆಯುತ್ತಿದ್ದರೂ ಕಡಿವಾಣ ಹಾಕಲು ಯಾವುದೇ ಅಧಿಕಾರಿಯೂ ಮುಂದೆ ಬರದಿರುವುದು ಅನುಮಾನಗಳಿಗೆ ಕಾರಣವಾಗುತ್ತಿದೆ. 2013ರಲ್ಲೇ ಅಕ್ರಮಗಳನ್ನು ತಡೆಗಟ್ಟಬಹುದು ಎಂಬ ವಿಶೇಷವಾದ ಅಧಿಕಾರವನ್ನು ಪೊಲೀಸ್ ಇಲಾಖೆಗೆ ನೀಡಿದ್ದರೂ ಸ್ಥಳೀಯ ಪೊಲೀಸರು ಇದನ್ನು ಉಪಯೋಗಿಸುತ್ತಿಲ್ಲ ಎಂದು ದೂರಿದರು.

ಅಕ್ರಮ ದಂಧೆಯನ್ನು ತಡೆಯುವಂತೆ ಒತ್ತಾಯಿಸಿದ್ದರೂ ಕ್ರಮಕೈಗೊಳ್ಳದೆ ಇರುವುದರ ಹಿಂದೆ ಬಲಿಷ್ಠ ಕೈಗಳು ಕೆಲಸ ಮಾಡುತ್ತಿವೆ ಎನ್ನುವುದು ಕಂಡುಬರುತ್ತಿದೆ. ಆದ್ದರಿಂದ ಜಿಲ್ಲಾಧಿಕಾರಿಗಳೇ ಮುದ್ದೇಬಿಹಾಳದಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ತಡೆಗಟ್ಟಬೇಕು ಎಂದು ಆಗ್ರಹಿಸಿದರು. ಪ್ರಭಾರಿ ತಹಸೀಲ್ದಾರ್ ಸಿ.ಎ. ಗುಡದಿನ್ನಿ ಅವರಿಗೆ ಮನವಿ ಸಲ್ಲಿಸಿದರು.

ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕಾಸಿನಕುಂಟಿ, ಕಾರ್ಯಕರ್ತರಾದ ಎನ್.ಎಸ್. ಜಾಧವ, ಅನೀಲ ವಡ್ಡರ, ಭೀಮಶಿ ಅಂಬಿಗೇರ, ಬಸವರಾಜ ಕಾಳಗಿ, ಅಭಿಷೇಕ ಇರಕಲ್, ಸಂತೋಷ ಶಿವಯೋಗಿಮಠ, ಮಂಜುನಾಥ ಪೂಜಾರಿ, ತನ್ವೀರ ಮಕಾನದಾರ, ಎಂ.ಎಂ.ಕುಂದರಗಿ, ಗೌತಮ ಹಿರೇಮಠ, ಮುತ್ತು ಕತ್ತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net