ವಿಜಯವಾಣಿ ಸುದ್ದಿಜಾಲ ಕಡಬ
ನಾಯಿ, ಬೆಕ್ಕಿನ ಮರಿ, ಹಾವುಗಳನ್ನು ರಸ್ತೆಗೆ ತಂದು ಬಿಡುತ್ತಿದ್ದಾರೆ. ಅಂಥವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಗ್ರಾಮಸ್ಥರು ರಾಮಕುಂಜ ಗ್ರಾಮಸಭೆಯಲ್ಲಿ ಆಗ್ರಹಿಸಿದ್ದಾರೆ.
ಗ್ರಾಪಂ ಅಧ್ಯಕ್ಷೆ ಸುಚೇತಾ ಬಿ. ಅಧ್ಯಕ್ಷತೆಯಲ್ಲಿ ಗ್ರಾಪಂ ಸಭಾಭವನದಲ್ಲಿ ಗ್ರಾಮಸಭೆ ನಡೆಯಿತು. ತಾಲೂಕು ಆರೋಗ್ಯಾಧಿಕಾರಿ(ಪ್ರಭಾರ) ಡಾ.ಅಮಿತ್ ಮಾರ್ಗದರ್ಶಿ ಅಧಿಕಾರಿಯಾಗಿದ್ದರು.
ವಿಷಯ ಪ್ರಸ್ತಾಪಿಸಿದ ಗ್ರಾಮಸ್ಥ ಪ್ರವೀಣ್ ದೇರೆಜಾಲು, ರಸ್ತೆ ಬದಿಯಲ್ಲಿ ನಾಯಿ ಮರಿ, ಬೆಕ್ಕಿನ ಮರಿಗಳನ್ನು ತಂದು ಬಿಡುತ್ತಾರೆ. ಕೆಲವೊಮ್ಮೆ ಹಾವುಗಳನ್ನು ತಂದು ಬಿಡುತ್ತಿದ್ದಾರೆ. ಅಂಥವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಈ ಬಗ್ಗೆ ಚರ್ಚೆ ನಡೆದು ಇಂತಹ ಪ್ರಕರಣ ತಡೆಯುವ ನಿಟ್ಟಿನಲ್ಲಿ ಸಿಸಿ ಕ್ಯಾಮರಾ ಅಳವಡಿಸಬೇಕೆಂಬ ಒತ್ತಾಯ ಕೇಳಿಬಂತು. ಪ್ರತಿಕ್ರಿಯಿಸಿದ ಪಿಡಿಒ ಮೋಹನ್‌ಕುಮಾರ್, ಸಿಸಿ ಕ್ಯಾಮರಾ ಎಲ್ಲ ಕಡೆ ಅಳವಡಿಸಲು ಸಾಧ್ಯವಿಲ್ಲ. ಗ್ರಾಮಸ್ಥರಿಗೇ ಅರಿವು ಆಗಬೇಕು. ರಸ್ತೆ ಬದಿ ತ್ಯಾಜ್ಯ ಎಸೆಯುವವರಿಗೆ 10 ಸಾವಿರ ರೂ. ದಂಡ ವಿಧಿಸಲು ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಗಿದೆ. ಮಾಹಿತಿ ನೀಡಿದವರಿಗೆ ಬಹುಮಾನ ನೀಡಲಾಗುವುದು. ಮನೆ-ಮನೆಗಳಿಂದ ಒಣ ಕಸ ಸಂಗ್ರಹ ಆರಂಭಿಸಲಾಗುವುದು ಎಂದರು.
ವಿವಿಧ ಇಲಾಖಾಧಿಕಾರಿಗಳು ಇಲಾಖಾವಾರು ಮಾಹಿತಿ ನೀಡಿದರು. ಗ್ರಾಪಂ ಉಪಾಧ್ಯಕ್ಷ ಕೇಶವ ಗಾಂಧಿಪೇಟೆ, ಸದಸ್ಯರಾದ ಯತೀಶ್ ಕುಮಾರ್, ಸೂರಪ್ಪ ಕುಲಾಲ್, ಪ್ರದೀಪ್ ಬಾಂತೊಟ್ಟು, ವಸಂತ, ಕುಶಾಲಪ್ಪ ಎಂ., ಅಬ್ದುಲ್ ರಹಿಮಾನ್, ಆಯಿಷಾ ಶರೀಫ್, ರೋಹಿಣಿ ಬಿ., ಜಯಶ್ರೀ, ಸುಜಾತ ಕೆ., ಭವಾನಿ, ಭಾರತಿ ಎಂ., ಪ್ರಶಾಂತ್ ಆರ್.ಕೆ., ಮಾಲತಿ ಉಪಸ್ಥಿತರಿದ್ದರು.
ಗೋಳಿತ್ತಡಿಗೆ ಬೇಕು ಬಸ್ ನಿಲ್ದಾಣ
ಗೋಳಿತ್ತಡಿ ಪೇಟೆಯ ಒಂದು ಬದಿ ಬಸ್ ನಿಲ್ದಾಣವಿದ್ದು, ಇನ್ನೊಂದು ಬದಿ ಬಸ್ ನಿಲ್ದಾಣವಿಲ್ಲ. ಇದರಿಂದ ಕಡಬ ಭಾಗಕ್ಕೆ ಪ್ರಯಾಣಿಸುವ ಪ್ರಯಾಣಿಕರು ಸಮಸ್ಯೆ ಎದುರಿಸುತ್ತಿದ್ದಾರೆ. ಇಲ್ಲಿ ಹೊಸದಾಗಿ ಬಸ್ ನಿಲ್ದಾಣ ಮಾಡಬೇಕೆಂದು ಸಂಜೀವ ಪೂಜಾರಿ ಆಗ್ರಹಿಸಿದರು. ಅಲ್ಲಿ ಜಾಗದ ಕೊರತೆ ಇದೆ. ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಅಧ್ಯಕ್ಷೆ ಸುಚೇತಾ ಬಿ. ತಿಳಿಸಿದರು. ಪಿಡಬ್ಲುೃಡಿ ಇಲಾಖೆ ಎನ್‌ಒಸಿ ನೀಡಿದಲ್ಲಿ ಗೋಳಿತ್ತಡಿಯಲ್ಲಿ ಬಸ್ ನಿಲ್ದಾಣ ನಿರ್ಮಾಣ ಮಾಡಲು ನಿರ್ಣಯಿಸಲಾಯಿತು.
ಸಬ್‌ಸ್ಟೇಷನ್ ಕಾಮಗಾರಿಗೆ ವೇಗ
ಕೊಯಿಲ, ರಾಮಕುಂಜ ಗ್ರಾಮಕ್ಕೆ ಗುಣಮಟ್ಟದ ವಿದ್ಯುತ್ ಪೂರೈಕೆ ನಿಟ್ಟಿನಲ್ಲಿ ಕೊಯಿಲದಲ್ಲಿ 33 ಕೆ.ವಿ. ಸಬ್‌ಸ್ಟೇಷನ್ ನಿರ್ಮಾಣ ಹಂತದಲ್ಲಿದೆ. ಈಗಾಗಲೇ ಶೇ.60ರಷ್ಟು ಕಾಮಗಾರಿ ಮುಗಿದಿದೆ. ಉಪ್ಪಿನಂಗಡಿಯಿಂದ ಕೊಯಿಲದ ತನಕ ಕಂಬ ಹಾಕಿ ಲೈನ್ ಎಳೆಯುವ ಕಾಮಗಾರಿ ಪ್ರಗತಿಯಲ್ಲಿದೆ. ಪೈಪ್, ಕೇಬಲ್ ಲೈನ್ ತಪ್ಪಿಸಿ ರಾಜ್ಯ ಹೆದ್ದಾರಿಯಿಂದ 1 ಮೀ. ದೂರದಲ್ಲಿ ಕಂಬ ಹಾಕಲಾಗಿದೆ. ಇದೀಗ ರಸ್ತೆ ಬದಿ ಕಂಬ ಹಾಕಿರುವ ಸಂಬಂಧ ಪಿಡಬ್ಲುೃಡಿ ಇಲಾಖೆಯಿಂದ ನೋಟಿಸ್ ಬಂದಿದೆ. ಇದಕ್ಕೆ ಉತ್ತರ ನೀಡಲಾಗುವುದು. ಗ್ರಾಮಸ್ಥರು ಸಹಕಾರ ನೀಡಬೇಕೆಂದು ಮೆಸ್ಕಾಂ ಉಪ್ಪಿನಂಗಡಿ ಶಾಖಾ ಸಹಾಯಕ ಇಂಜಿನಿಯರ್ ನಿತಿನ್ ಕುಮಾರ್ ತಿಳಿಸಿದರು.