ಜಿಲ್ಲೆ

ಜ್ಞಾನದ ಹಸಿವು ಹೆಚ್ಚಾದಂತೆ ಸಾಧನೆ ಸುಗಮ

ಇಂದಿರಾ ಎನ್ ಕೆ

ವಿಜಯವಾಣಿ ಸುದ್ದಿಜಾಲ ಬೈಂದೂರು

ಜ್ಞಾನದ ಹಸಿವು ಹೆಚ್ಚಾದಂತೆ ಸಾಧನೆ ಹಾದಿ ಸುಗಮ. ಅನಗತ್ಯ ವಿಚಾರಗಳ ಬಗ್ಗೆ ಕಾಲಹರಣ ಮಾಡುವುದಕ್ಕಿಂತ ಮಕ್ಕಳು ಬಾಲ್ಯದಿಂದಲೇ ಓದುವ ಹವ್ಯಾಸ ಹೆಚ್ಚಿಸಿದರೆ ಬೌದ್ಧಿಕ ಹಾಗೂ ಮಾನಸಿಕವಾಗಿ ಸಧೃಡರಾಗಬಹುದು ಎಂದು ಉಪ್ಪುಂದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲ ಚಂದ್ರಹಾಸ ಹೇಳಿದರು.

ಉಪ್ಪುಂದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗ ಎಂಟನೇ ತರಗತಿಯಲ್ಲಿ ಉಪ್ಪುಂದ ಜೆಸಿಐ ಘಟಕ ವತಿಯಿಂದ ಗುರುವಾರ, ಒಂದು ವರ್ಷ ಉಚಿತ ವಿಜಯವಾಣಿ ಪತ್ರಿಕೆ ವಿತರಣೆ ಯೋಜನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಾಟ್ಸಾೃಪ್, ಇಂಟರ್ನೆಟ್‌ಗಳಂತಹ ಮಾಧ್ಯಮದಿಂದ ದೂರವಿದ್ದು, ಪುಸ್ತಕ, ಪತ್ರಿಕೆ ಪ್ರೇಮಿಗಳಾಗಿ ಅದರಿಂದ ಹೆಚ್ಚಿನ ಜ್ಞಾನ ಸಂಪಾದಿಸಿ ಸಾಧನೆ ಶಿಖರವೇರಿ ಎಂದು ವಿದ್ಯಾರ್ಥಿಗಳಿಗೆ ಕವಿಮಾತು ಹೇಳಿದರು.

ಜಿಸಿಐ ಪೂರ್ವಾಧ್ಯಕ್ಷ ಗಿರೀಶ ಶ್ಯಾನುಭಾಗ್ ಮಾತನಾಡಿ, ಇಂದಿನ ಕಾಲಘಟ್ಟದಲ್ಲಿ ಸಾಮಾಜಿಕ ಜಾಲತಾಣಗಳ ಅತೀ ಆಸಕ್ತಿಯಿಂದ ಬಾಲ್ಯದಿಂದಲೇ ಮಕ್ಕಳು ತಪ್ಪುದಾರಿಯಲ್ಲಿ ಸಾಗುತ್ತಿರುವುದು ಕಂಡುಬರುತ್ತಿದೆ. ಈ ಬಗ್ಗೆ ವಿದ್ಯಾರ್ಥಿಗಳಿಗೆ ಓದಿನ ಮೂಲಕ ಜಾಗೃತಿ ಮೂಡಿಸುತ್ತಿರುವ ಪತ್ರಿಕೆ ವಿತರಕರ ಕಾರ್ಯ ಶ್ಲಾಘನೀಯ ಎಂದರು.

ಉಪ್ಪುಂದ ಜೆಸಿಐ ಅಧ್ಯಕ್ಷ ಭರತ್ ದೇವಾಡಿಗ ಇವರು ಎಂಟನೇ ತರಗತಿ ವಿದ್ಯಾರ್ಥಿಗಳಾದ ಸುಜಯ್, ಪ್ರಥ್ವೀಶ್, ಬೀಗನ್, ಭರತ್‌ಗೆ ಉಚಿತವಾಗಿ ವಿಜಯವಾಣಿ ಪತ್ರಿಕೆ ಹಸ್ತಾಂತರಿಸಿದರು. ಗಾ.ಪಂ. ಸದಸ್ಯ ಶೇಖರ ಪೂಜಾರಿ, ಸಹಶಿಕ್ಷಕಿ ದಾಕ್ಷಾಯಣಿ, ಪತ್ರಿಕಾ ವಿತರಕ ಸುಬ್ರಹ್ಮಣ್ಯ ಖಾರ್ವಿ ಇದ್ದರು. ಜೆಸಿಐ ಪೂರ್ವಾಧ್ಯಕ್ಷ ಮಂಜುನಾಥ ದೇವಾಡಿಗ ಕಾರ್ಯಕ್ರಮ ನಿರ್ವಹಿಸಿದರು.

ಪತ್ರಿಕೆ ಓದಿ ಬಹುಮಾನ ಗೆಲ್ಲಿ

ಇದು ವಿಜಯವಾಣಿ ಸ್ಥಳೀಯ ವಿತರಕ ಸಂಸ್ಥೆ ಜಯಲಕ್ಷ್ಮೀ ಪೇಪರ್ ಏಜೆನ್ಸಿ ಪ್ರವರ್ತಕ ಸುಬ್ರಹ್ಮಣ್ಯ ಖಾರ್ವಿಯವರಿಂದ ಮಕ್ಕಳಿಗಾಗಿ ಈ ವರ್ಷದ ಕೊಡುಗೆ. ಪ್ರತಿ ತಿಂಗಳು ಒಂದು ತರಗತಿಯ ಎಲ್ಲ ಮಕ್ಕಳಿಗೆ (ಪೌಢಶಾಲಾ ವಿಭಾಗ) ಉಚಿತ ಪತ್ರಿಕೆ ನೀಡಲಾಗುತ್ತದೆ. ತಿಂಗಳ ಕೊನೆಯಲ್ಲಿ ಪತ್ರಿಕೆಯಲ್ಲಿ ಪ್ರಕಟಗೊಂಡಿರುವ ವಿಷಯಗಳ ಬಗ್ಗೆ ಪ್ರಶ್ನೆ ಕೇಳಲಾಗುತ್ತದೆ. ಸರಿ ಉತ್ತರ ನೀಡಿದ ನಾಲ್ಕು ವಿದ್ಯಾರ್ಥಿಗಳಿಗೆ ಒಂದು ವರ್ಷ ಉಚಿತ ವಿಜಯವಾಣಿ ನೀಡಲಾಗುತ್ತಿದೆ. ಇದಕ್ಕಾಗಿ ಪ್ರತಿ ತಿಂಗಳಿಗೂ ಒಂದೊಂದು ಸ್ಥಳೀಯ ಸಂಸ್ಥೆ ಪ್ರಾಯೋಜಕತ್ವ ವಹಿಸಿಕೊಂಡಿದೆ.