ಜಿಲ್ಲೆ

ಭಜನೆಗೆ ಪರಿಶುದ್ಧ ತನು, ಮನ ಮುಖ್ಯ : ಡಾ.ಡಿ.ವೀರೇಂದ್ರ ಹೆಗ್ಗಡೆ ಅಭಿಪ್ರಾಯ

ಬೆಳ್ತಂಗಡಿ: ಭಜನೆ ಮಾಡುವಾಗ ಪರಿಶುದ್ಧ ತನು, ಮನದಿಂದ ದೃಢಸಂಕಲ್ಪದೊಂದಿಗೆ ಯಾವುದೇ ರೀತಿಯ ಚಿಂತೆ, ಸಂಕೋಚ ಇಲ್ಲದೆ ಭಕ್ತಿ ಹಾಗೂ ಉತ್ಸಾಹದಿಂದ ಮಾಡಬೇಕು ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.

ಧರ್ವಸ್ಥಳ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ನೇತೃತ್ವದಲ್ಲಿ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಭಜನಾ ಕಮ್ಮಟದಲ್ಲಿ ಉತ್ತಮ ಸೇವೆ, ಸಾಧನೆ ಮಾಡಿದ 23 ಭಜನಾ ಮಂಡಳಿಗಳಿಗೆ ಶನಿವಾರ ‘ಸಾಧಕ ಪ್ರಶಸ್ತಿ’ ಪ್ರದಾನ ಮಾಡಿ ಅಭಿನಂದಿಸಿ ಮಾತನಾಡಿದರು.

ಎಲ್ಲಾ ಭಜನಾ ಮಂಡಳಿಗಳ ಸೇವಾ ಕಳಕಳಿ ಮತ್ತು ಬದ್ಧತೆಯನ್ನು ಶ್ಲಾಘನೀಯ. ಹಿಂದೆ ಎಲ್ಲಾ ಕಡೆಗಳಲ್ಲಿ ‘ಜನ ಮರುಳೋ, ಜಾತ್ರೆ ಮರುಳೋ’ ಎಂಬ ಮಾತು ಕೇಳಿ ಬರುತ್ತಿತ್ತು. ಆದರೆ ಈಗ ಎಲ್ಲೆಡೆ ಭಜನಾ ಮಂಡಳಿಗಳಿಂದಾಗಿ ಎಲ್ಲಾ ಊರುಗಳಲ್ಲಿ ನಡೆಯುವ ಜಾತ್ರೆ, ಉತ್ಸವ, ಸಭೆ ಸಮಾರಂಭ, ಹಬ್ಬ ಹರಿದಿನಗಳಲ್ಲಿ ಶಿಸ್ತು, ಸಂಯಮ, ಸ್ವಚ್ಛತೆ, ಬದ್ಧತೆ ಹಾಗೂ ಸೇವಾ ಕಳಕಳಿ ಕಂಡುಬರುತ್ತಿರುವುದು ನಮಗೆ ಹೆಚ್ಚಿನ ಸಂತೋಷ ಮತ್ತು ತೃಪ್ತಿ ನೀಡಿದೆ. ವಿಶೇಷವಾಗಿ ಭಜನೆಯಲ್ಲಿ ಪುಟ್ಟಮಕ್ಕಳ ಪ್ರತಿಭೆ, ಆಸಕ್ತಿ ಮತ್ತು ಉತ್ಸಾಹವನ್ನು ಶ್ಲಾಸಿದರು.

ಭಜನಾ ಪರಿಷತ್‌ನ ಅಧ್ಯಕ್ಷ ಚಂದ್ರಶೇಖರ ಸಾಲ್ಯಾನ್ ಮತ್ತು ಉಪಾಧ್ಯಕ್ಷ ರಾಜೇಂದ್ರ ಕುಮಾರ್ ಬಸ್ರೂರು ಹಾಗೂ ಎಲ್ಲಾ ಪದಾಧಿಕಾರಿಗಳ ಸೇವೆಯನ್ನು ಹೆಗ್ಗಡೆ ಶ್ಲಾಸಿದರು. ಡಾ.ಹೇಮಾವತಿ ವೀ.ಹೆಗ್ಗಡೆ, ಡಿ.ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಮಾಣಿಲದ ಮೋಹನದಾಸ ಸ್ವಾಮೀಜಿ ಮತ್ತು ಭಜನಾ ಪರಿಷತ್ ಅಧ್ಯಕ್ಷರಾದ ಚಂದ್ರಶೇಖರ ಸಾಲ್ಯಾನ್ ಉಪಸ್ಥಿತರಿದ್ದರು.

ಭಜನಾ ಕಮ್ಮಟದ ಕಾರ್ಯದರ್ಶಿ ಎ.ವಿ.ಶೆಟ್ಟಿ ಸ್ವಾಗತಿಸಿದರು. ಭಜನಾ ಕಮ್ಮಟದ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್ ಪ್ರಸ್ತಾವಿಸಿದರು. ವಕೀಲ ಕೇಶವ ಗೌಡ ನಿರೂಪಿಸಿದರು. ಭಜನಾ ಪರಿಷತ್‌ನ ಉಪಾಧ್ಯಕ್ಷ ರಾಜೇಂದ್ರ ಕುಮಾರ್ ಬಸ್ರೂರು ವಂದಿಸಿದರು.