ಸಾಂದರ್ಭಿಕ ಚಿತ್ರ 
ಜಿಲ್ಲೆ

ಕರೊನಾ ಸೋಂಕಿನ ಕಾರಣಕ್ಕೆ ಆಸ್ಪತ್ರೆಗಳು ಭರ್ತಿ; ಅಪಘಾತಕ್ಕೀಡಾಗಿದ್ದ ವ್ಯಕ್ತಿಗೆ ಹಾಸಿಗೆ ಸಿಗದೆ ಸಾವು

ಬೆಂಗಳೂರು: ರಸ್ತೆ ಅಪಘಾತಕ್ಕೆ ಒಳಗಾಗಿದ್ದ ದ್ವಿಚಕ್ರ ವಾಹನ ಸವಾರನನ್ನು ಕರೆದುಕೊಂಡು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿದರೂ ಸಮಯಕ್ಕೆ ಸರಿಯಾಗಿ ಹಾಸಿಗೆ ಸಿಗದ ಕಾರಣ ಅವರು ಮೃತಪಟ್ಟಿದ್ದಾರೆ. ರಾಮಮೂರ್ತಿನಗರ ಸಮೀಪದ ಕಲ್ಕೆರೆ ನಿವಾಸಿ ಶ್ರೀನಿವಾಸ್​ (54) ಮೃತರು. ತಮಿಳುನಾಡು ಮೂಲದ ಶ್ರೀನಿವಾಸ್​, ಕುಟುಂಬದ ಜತೆ ಕಲ್ಕೆರೆಯಲ್ಲಿ ನೆಲೆಸಿದ್ದರು.

ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಶ್ರೀನಿವಾಸ್​, ಸೋಮವಾರ ಸಂಜೆ ಕೆ.ಆರ್​.ಪುರ ಕಡೆಯಿಂದ ಹೆಬ್ಬಾಳಕ್ಕೆ ದ್ವಿಚಕ್ರ ವಾಹನದಲ್ಲಿ ಹೊರ ವರ್ತುಲ ರಸ್ತೆಯಲ್ಲಿ​ ತೆರಳುವಾಗ ಮಾರ್ಗ ಮಧ್ಯೆ ರಸ್ತೆ ವಿಭಜಕ್ಕೆ ಡಿಕ್ಕಿ ಹೊಡೆದಿದ್ದರು. ಗಾಯಗೊಂಡಿದ್ದ ಶ್ರೀನಿವಾಸ್​ ರಕ್ಷಣೆ ಜೊಮ್ಯಾಟೋ ಡೆಲಿವರಿ ಹುಡುಗರು ಧಾವಿಸಿದರು. ಕೂಡಲೇ ಗಾಯಾಳುವನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಕರೊನಾ ಸೋಂಕಿತರಿಂದ ಹಾಸಿಗೆಗಳು ಭರ್ತಿಯಾಗಿವೆ ಎಂದು ಗಾಯಾಳುವನ್ನು ದಾಖಲು ಮಾಡಿಕೊಳ್ಳಲು ಖಾಸಗಿ ಆಸ್ಪತ್ರೆ ಸಿಬ್ಬಂದಿ ನಿರಾಕರಿಸಿದ್ದಾರೆ. ಅಲ್ಲಿಂದ ಡಾ.ಅಂಬೇಡ್ಕರ್​ ವೈದ್ಯಕೀಯ ಕಾಲೇಜ್​ ಆಸ್ಪತ್ರೆಗೆ ಗಾಯಾಳುವನ್ನು ಕರೆದುಕೊಂಡು ಹೋಗಿದ್ದರು. ಆ ಆಸ್ಪತ್ರೆಯಲ್ಲಿ ಕೂಡ ಕರೊನಾ ಸೋಂಕಿತರ ಕಾರಣಕ್ಕೆ ಚಿಕಿತ್ಸೆ ಸಿಕ್ಕಿಲ್ಲ.

ನಂತರ ಮತ್ತೊಂದು ಖಾಸಗಿ ಆಸ್ಪತ್ರೆಗೆ ಗಾಯಾಳುವನ್ನು ಕರೆದುಕೊಂಡು ಹೋಗಿದ್ದರು. ಅಲ್ಲಿ ಗಾಯಾಳುವನ್ನು ತಪಾಸಣೆ ನಡೆಸಿದ ವೈದ್ಯರು, ಶ್ರೀನಿವಾಸ್​ ದಾರಿ ಮಧ್ಯೆ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ ಎಂದು ಪೂರ್ವ ವಿಭಾಗ (ಸಂಚಾರ)ದ ಡಿಸಿಪಿ ಶಾಂತರಾಜ್​ ತಿಳಿಸಿದ್ದಾರೆ. ಬಾಣಸವಾಡಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.