ಮೃತ ನಿಷಾದ್ 
ಜಿಲ್ಲೆ

ದ್ವಿಚಕ್ರ ವಾಹನಗಳ ನಡುವೆ ಅಪಘಾತ, ಓರ್ವ ಮೃತ್ಯು, ಯಮಪುರಕ್ಕೆ ರಹದಾರಿಯಾಗುತ್ತಿದೆ ಕಲ್ಲಾಪು, ಇಲ್ಲಿ ಬಲಿಯಾಗಿವೆ ಹಲವು ಜೀವಗಳು

ಇಂದಿರಾ ಎನ್ ಕೆ

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ತೊಕ್ಕೊಟ್ಟು ಸಮೀಪದ ಕಲ್ಲಾಪುವಿನಲ್ಲಿ ಗುರುವಾರ ಬೆಳಗ್ಗೆ ಎರಡು ಸ್ಕೂಟರ್‌ಗಳ ನಡುವೆ ನಡೆದ ಮುಖಾಮುಖಿ ಅಪಘಾತದಲ್ಲಿ ಓರ್ವ ಯುವಕ ಮೃತಪಟ್ಟಿದ್ದು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಉಳ್ಳಾಲ ಕೋಡಿ ನಿವಾಸಿ ಅಹಮ್ಮದ್ ನಿಷಾದ್(22) ಮೃತ ಯುವಕ. ಮುಂಜಾನೆ ಮಂಗಳೂರಿನಿಂದ ತೊಕ್ಕೊಟ್ಟಿಗೆ ಸಯ್ಯದ್ ಹಫೀಝ್ ಎಂಬುವರ ಸ್ಕೂಟರ್‌ನಲ್ಲಿ ಸಹಸವಾರನಾಗಿ ತೆರಳುತ್ತಿದ್ದರು. ಅವರ ಸ್ಕೂಟರ್ ಕಲ್ಲಾಪು ಜಂಕ್ಷನ್ ತಲುಪಿದಾಗ ತೊಕ್ಕೊಟ್ಟಿನಿಂದ ಗ್ಲೋಬಲ್ ಮಾರುಕಟ್ಟೆಗೆ ಹೋಗುತ್ತಿದ್ದ ಸ್ಕೂಟರ್ ಕಲ್ಲಾಪು ರಾಷ್ಟ್ರೀಯ ಹೆದ್ದಾರಿಯಲ್ಲಿ ತಿರುವು ಪಡೆದು ನಿಷಾದ್ ಇದ್ದ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಎರಡು ಸ್ಕೂಟರ್‌ಗಳ ಸವಾರರೂ ರಸ್ತೆಗೆಸೆಯಲ್ಪಟ್ಟಿದ್ದು, ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣ ಮೂವರನ್ನೂ ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ನಿಷಾದ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಸ್ಕೂಟರ್ ಸವಾರ ಹಫೀಝ್ ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದರೆ, ಇನ್ನೊಂದು ಸ್ಕೂಟರ್‌ನ ಸವಾರ ಕುತ್ತಾರುಪದವು ನಿವಾಸಿ ಅಬೂಬಕ್ಕರ್ ಸಿದ್ದೀಕ್ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.


ಸಾವಿನ ರಹದಾರಿ ಕಲ್ಲಾಪು!

ರಾಷ್ಟ್ರೀಯ ಹೆದ್ದಾರಿ ಕಲ್ಲಾಪುವಿನಲ್ಲಿ ಈಗಾಗಲೇ ಸಾಕಷ್ಟು ಅಪಘಾತಗಳು ಸಂಭವಿಸಿದ್ದು, ಹಲವು ಮಂದಿ ಬಲಿಯಾಗಿದ್ದಾರೆ. ನಂತೂರಿನಿಂದ ತಲಪಾಡಿವರೆಗೆ ಹೆದ್ದಾರಿ ವಿಸ್ತರಣೆ ಸಂದರ್ಭ ಗುತ್ತಿಗೆ ಕಂಪನಿ ನವಯುಗ ಸರ್ವೀಸ್ ರಸ್ತೆಯನ್ನೇ ನಿರ್ಮಿಸಿಲ್ಲ. ಕೆಲವೊಂದು ಕಡೆಗಳಲ್ಲಿ ಸ್ಥಳೀಯರ ಹೋರಾಟದ ಫಲವಾಗಿ ನೂರಿನ್ನೂರು ಮೀಟರ್ ಸರ್ವೀಸ್ ರಸ್ತೆ ನಿರ್ಮಾಣವಾಗಿದೆ. ಕಲ್ಲಾಪು ಹೆದ್ದಾರಿ ದಿನವಿಡೀ ವಾಹನಗಳಿಂದ ಕೂಡಿದೆ. ಮತ್ತೊಂದೆಡೆ ಖಾಸಗಿ ಮಾರುಕಟ್ಟೆ ನಿರ್ಮಾಣವಾಗಿದೆ. ಇದರಿಂದಾಗಿ ಮುಂಜಾನೆಯೇ ದೂರದ ಜಿಲ್ಲೆಗಳಿಂದ ತರಕಾರಿ, ಹಣ್ಣುಗಳನ್ನು ಹೇರಿಕೊಂಡು ಲಾರಿ, ಟೆಂಪೋಗಳು ಬರುತ್ತಿದ್ದರೆ, ಕಾಸರಗೋಡು, ಮಂಗಳೂರು ಹಾಗೂ ಇತರ ಭಾಗಗಳಿಗೆ ತರಕಾರಿ, ಹಣ್ಣುಗಳನ್ನು ಸಾಗಿಸಲು ವಾಹನಗಳು ಬರುತ್ತಿವೆ. ಸಾಕಷ್ಟು ಕಾರ್ಮಿಕರು ವಾಹನಗಳಲ್ಲಿ ಬರುವುದರಿಂದ ಈ ರಸ್ತೆ ಮುಂಜಾನೆಯೇ ವಾಹನ ನಿಬಿಡವಾಗುತ್ತದೆ. ಇಲ್ಲೇ ರಸ್ತೆಬದಿ ಪೆಟ್ಟಿಗೆ ಅಂಗಡಿಗಳು, ಪೆಟ್ರೋಲ್ ಪಂಪ್, ದಿನಸಿ ಅಂಗಡಿ, ಸಭಾಂಗಣ ಇದ್ದು ವಿರುದ್ಧ ದಿಕ್ಕಿನಲ್ಲಿ ಬರುವ ವಾಹನಗಳಿಗೆ ಕಡಿವಾಣ ಹಾಕಲು ಸಾಧ್ಯವಾಗಿಲ್ಲ.

ಮೊದಲೇ ಎಚ್ಚರಿಸಿತ್ತು ವಿಜಯವಾಣಿ

ಹೆದ್ದಾರಿ ನಿರ್ಮಿಸಿದ ಗುತ್ತಿಗೆ ಕಂಪನಿ ಇಲ್ಲಿ ಅತ್ಯಗತ್ಯವಿದ್ದ ಸರ್ವೀಸ್ ರಸ್ತೆ ಅಥವಾ ಕೆಳಸೇತುವೆ ನಿರ್ಮಿಸುವ ಬದಲು ಹೆದ್ದಾರಿಯ ನಡುವಲ್ಲೇ ತಿರುವಿಗೆ ವ್ಯವಸ್ಥೆ ಮಾಡಿ ಎರಡೂ ಬದಿಗಳಲ್ಲಿ ಬ್ಯಾರಿಕೇಡ್ ಅಳವಡಿಸಿದೆ. ಇದರಿಂದಾಗಿ ವಾಹನ ಸಂಚಾರಕ್ಕೆ ಅಡ್ಡಿಯಾಗುವುದಲ್ಲದೆ ಅಪಘಾತಗಳಿಗೂ ಕಾರಣವಾಗುತ್ತಿದೆ. ರಸ್ತೆ ನಿರ್ಮಾಣ ಸಂದರ್ಭ ಜನಪ್ರತಿನಿಧಿಗಳು, ಅಧಿಕಾರಿಗಳ ಮೌನದ ಪರಿಣಾಮ ಜನರ ಸಾವಿನ ರಹದಾರಿಯಾಗುತ್ತಿದೆ. ಇಲ್ಲಿನ ಹಾಗೂ ಇತರ ಕಡೆಗಳಲ್ಲಿನ ದುರವಸ್ಥೆ ಬಗ್ಗೆ ‘ವಿಜಯವಾಣಿ’ ಮೇ 8ರ ಸಂಚಿಕೆಯಲ್ಲಿ ವಿಶೇಷ ವರದಿ ಪ್ರಕಟಿಸಿ ಅಧಿಕಾರಿಗಳನ್ನು ಎಚ್ಚರಿಸುವ ಪ್ರಯತ್ನ ಮಾಡಿತ್ತು.