ಪುತ್ತೂರು ಗ್ರಾಮಾಂತರ: ಅಡುಗೆ ಅನಿಲ ಸಿಲಿಂಡರ್ ಹೇರಿಕೊಂಡು ಹೋಗುತ್ತಿದ್ದ ಲಾರಿಯೊಂದು ಡಿಕ್ಕಿ ಹೊಡೆದು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪುತ್ತೂರಿನ ಕೊಂಬೆಟ್ಟು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ತೀವ್ರ ಗಾಯಗೊಂಡ ಘಟನೆ ಮಂಗಳವಾರ ನಡೆದಿದೆ.
ಮಾಡ್ನೂರು ಗ್ರಾಮದ ಮದ್ಲ ಆಚಾರಿಮೂಲೆ ನಿವಾಸಿ ಚಂದ್ರಶೇಖರ್ ಮೂಲ್ಯ ಅವರ ಪುತ್ರಿ ಕೊಂಬೆಟ್ಟು ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಅಂಕಿತ ಗಾಯಗೊಂಡವರು. ಮಂಗಳವಾರ ಕಾಲೇಜಿಗೆ ಬಂದಿದ್ದ ಅಂಕಿತಾ ಪುತ್ತೂರಿನಿಂದ ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ಮನೆಗೆ ಹೋಗಿದ್ದರು. ಆದರೆ ಆಕೆ ಇಳಿಯುವ ಸ್ಥಳವಾದ ಮದ್ಲದಲ್ಲಿ ಬಸ್ ನಿಲ್ಲಿಸದ ಕಾರಣ ಕಾವು ನನ್ಯದಲ್ಲಿ ಬಸ್ಸಿನಿಂದ ಇಳಿದು ನಡೆದುಕೊಂಡು ಮನೆ ಕಡೆ ಹೋಗುತ್ತಿದ್ದ ವೇಳೆ ಮಂಗಳೂರಿನಿಂದ ಮೈಸೂರು ಕಡೆ ಹೋಗುತ್ತಿದ್ದ ಅಡುಗೆ ಅನಿಲ ಸಿಲಿಂಡರ್ ಸಾಗಾಟದ ಲಾರಿ ಡಿಕ್ಕಿ ಹೊಡೆದಿದೆ. ವಿದ್ಯಾರ್ಥಿನಿಯನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.