ವಿಜಯಪುರ ಕರ್ನಾಟಕ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ "ಯುವಜನ ಹಾಗೂ ಸಹಕಾರ' ಸಂವಾದ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ರಾಮನಗೌಡ ಪಾಟೀಲ, ಪ್ರೊ. ಬಿ.ಕೆ. ತುಳಸಿಮಾಲ, ಡಾ. ಎ.ಆರ್​. ಶ್ರೀನಾಥ್​, ಜಿ. ನಂಜನಗೌಡ, ಸುಭಾಷ್​ ಇಂಡಿ, ಶಂಕರಗೌಡ ಸೋಮನಾಳ, ಪ್ರೊ. ಚಂದ್ರಶೇಖರ ಎಚ್​ಎಂ. ಇತರರಿದ್ದರು. 
ಜಿಲ್ಲೆ

ಸಹಕಾರಿ ಕ್ಷೇತ್ರದಲ್ಲಿ ವಿಪುಲ ಅವಕಾಶ - ನಿರ್ದೇಶಕ ರಾಮನಗೌಡ ಪಾಟೀಲ ಅಭಿಮತ

ಗಿರೀಶ ಸಗರ

ವಿಜಯಪುರ: ಸಹಕಾರಿ ರಂಗದಲ್ಲಿ ವಿಪುಲ ಅವಕಾಶವಿದ್ದು ಯುವ ಪೀಳಿಗೆ ಈ ವಿಷಯವಾಗಿ ಸಾಕಷ್ಟು ಅರಿವು ಮೂಡಿಸಿಕೊಂಡು ಭವಿಷ್ಯದಲ್ಲಿ ಉದ್ಯೋಗಿಯಾಗದೆ, ಉದ್ಯಮಿಯಾಗುವತ್ತ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ನಿರ್ದೇಶಕ ರಾಮನಗೌಡ ಪಾಟೀಲ ಹೇಳಿದರು.

ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕನ್ನಡ ಭವನದಲ್ಲಿ ಅರ್ಥಶಾಸ್ತ್ರ ಅಧ್ಯಯನ ವಿಭಾಗದ ಹಾಗೂ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ, ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ "ಯುವ ಜನ ಹಾಗೂ ಸಹಕಾರ' ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಹಕಾರಿ ಕ್ಷೇತ್ರದ ಕಲಿಕೆಗೆ ಮಹಿಳಾ ವಿಶ್ವವಿದ್ಯಾಲಯ ಮುಂದಾಗಿರುವುದು ಶ್ಲಾನೀಯ, ಕೇವಲ ಥಿಯೇರಿ ವಿಷಯಕ್ಕಷ್ಟೆ ಪಠ್ಯ ಸೀಮಿತವಾಗದೆ ಪ್ರಾಯೋಗಿಕವಾಗಿಯೂ ಕಲಿಕಾ ವಿದ್ಯಾರ್ಥಿಗಳಿಗೆ ತರಬೇತಿ ಸಿಕ್ಕರೆ ಅವರಿಗೆ ಅನುಕೂಲವಾಗಲಿದೆ. ಅದರಲ್ಲೂ ಮಹಿಳೆಯರು ಸಹಕಾರಿ ಕ್ಷೇತ್ರದಲ್ಲಿ ಮುನ್ನುಗ್ಗಬೇಕು. ಆಧುನಿಕ ತಂತ್ರಜ್ಞಾನ ಜ್ಞಾನಕೋಶವಾಗಿರುವ ಮೊಬೈಲ್​ನ್ನು ಡಿಜಿಟಲ್​ ಮಾರ್ಕೆಟಿಂಗ್​ಗೆ ಬಳಕೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.

ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಕೆ. ತುಳಸಿಮಾಲ ಕಾರ್ಯಕ್ರಮ ಉದ್ಘಾಟಿಸಿ, ಸಹಕಾರ ರಂಗದ ಮೂಲಕ ವ್ಯಕ್ತಿಗತವಾದ ಮಹಿಳಾ ಹಾಗೂ ಸಾಮೂಹಿಕ ಸಬಲೀಕರಣಕ್ಕೆ ಪೂರಕವಾಗಿದೆ. ದೇಶದ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಿದೆ. ವಿಶ್ವವಿದ್ಯಾಲಯ ವತಿಯಿಂದಲೂ ಸಹಕಾರಿ ಕ್ಷೇತ್ರದಲ್ಲಿ ಸರ್ಟಿಫಿಕೇಷನ್​ ಕೋರ್ಸ್​ ಮಾಡಲು ಚಿಂತನೆ ಮಾಡಲಾಗುತ್ತಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ಅಧ್ಯಕ್ಷ ಜಿ. ನಂಜನಗೌಡ ಮಾತನಾಡಿ, ತಾನು ಎಲ್ಲರಿಗಾಗಿ ಎಲ್ಲರೂ ತನಗಾಗಿ ಎಂಬ ಧ್ಯೇಯ ಹೊಂದಿರುವ ಸಹಕಾರ ಕ್ಷೇತ್ರಕ್ಕೆ ಕೇಂದ್ರ ಸರ್ಕಾರ ಅತ್ಯಂತ ಪ್ರಾಧಾನ್ಯತೆ ನೀಡಿದ್ದು, ಇಂದಿನ ಮಹಿಳೆಯರು ಹಾಗೂ ಯುವ ಪೀಳಿಕೆ ಸಹಕಾರಿ ರಂಗಕ್ಕೆ ಬಂದು, ಪ್ರಾಮಾಣಿಕತೆ ಹಾಗೂ ನೈಪುಣ್ಯತೆಯಿಂದ ವ್ಯವಹಾರ ಮಾಡುವ ಮೂಲಕ ವೈಯಕ್ತಿಕ ಆರ್ಥಿಕ ಸಬಲತೆಯನ್ನು ಹೊಂದುವುದರ ಜೊತೆಗೆ ದೇಶದ ಆರ್ಥಿಕ ಅಭಿವೃದ್ಧಿಗೂ ಕಾರಣೀಭೂತರಾಗಬೇಕು ಎಂದು ಹೇಳಿ, ಸಹಕಾರ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಗುಜರಾತ್​ನ ಅಮೂಲ್​, ರಾಜ್ಯದ ಕೆಎಂಎ್​ ಮುಂತಾದ ಸಾಧಕ ಸಹಕಾರಿ ಉದ್ಯಮಗಳ ಉದಾಹರಣೆಯೊಂದಿಗೆ ಶಿಬಿರಾರ್ಥಿಗಳಿಗೆ ಮಾಹಿತಿ ನೀಡಿದರು.

ವೃತ್ತಿಪರ ನಿರ್ದೇಶಕ ಸುಭಾಷ್​ ಇಂಡಿ, ಕುಲಸಚಿವ ಶಂಕರಗೌಡ ಸೋಮನಾಳ, ಪ್ರೊ. ಚಂದ್ರಶೇಖರ ಎಚ್​ಎಂ. ಪ್ರಾದೇಶಿಕ ಕೇಂದ್ರದ ನಿರ್ದೇಶಕ ಪ್ರೊ. ಡಿ.ಎಂ. ಮದರಿ, ಅರ್ಥಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೊ. ಆರ್​.ವಿ. ಗಂಗಶೆಟ್ಟಿ ಇತರರಿದ್ದರು.

ನಂತರ ನ್ಯಾಷನಲ್​ ಕೋ&ಆಪರೇಟಿವ್​ ಯೂನಿಯನ್​ ಆ್​ ಇಂಡಿಯಾ ನವದೆಹಲಿಯ ನಿರ್ದೇಶಕ ಡಾ. ಎ.ಆರ್​. ಶ್ರೀನಾಥ್​ ಮಾತನಾಡಿ, ದೇಶದಲ್ಲಿ ಸಹಕಾರಿ ಕ್ಷೇತ್ರ ಬೆಳೆದುಬಂದ ಹೆಜ್ಜೆಗುರುತಿನ ಪೂರ್ಣ ಮಾಹಿತಿಯನ್ನು ವಿವರಿಸಿದರಲ್ಲದೇ, ಸಹಕಾರಿ ರಂಗದಲ್ಲಿರುವ ವಿವಿಧ ಕ್ಷೇತ್ರದ ಸಾಧಕ ಬಾಧಕಗಳನ್ನು ವಿವರಿಸಿದರು. ಮಹಿಳಾ ವಿವಿಯ ಶಿಕ್ಷಣ ವಿಭಾಗದ ಪ್ರಾಧ್ಯಾಪಕ ಪ್ರೊ. ಯುಕೆ. ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು.

ತದನಂತರ ಶಿಬಿರಾರ್ಥಿಗಳೊಂದಿಗೆ ನೇರ ಸಂವಾದ ನಡೆಯಿತು. ಸಂವಾದನಕಾರರಾಗಿ ಅಧ್ಯಕ್ಷ ಜಿ. ನಂಜನಗೌಡ, ಡಾ. ಎ.ಆರ್​. ಶ್ರೀನಾಥ್​, ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥ ಪ್ರೊ. ಜಿ.ಬಿ. ಸೋನಾರ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಹಕಾರ ಸಂಗಳ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಶಿವಶಂಕರ ಸ್ವಾಮಿ, ವಿಜಯವಾಣಿ ದಿನಪತ್ರಿಕೆ ಸ್ಥಾನಿಕ ಸಂಪಾದಕ ಕೆ.ಎನ್​. ರಮೇಶ್​, ವೃತ್ತಿಪರ ನಿರ್ದೇಶಕ ಸುಭಾಷ್​ ಇಂಡಿ ಇತರರು ಭಾಗವಹಿಸಿ, ಶಿಬಿರಾರ್ಥಿಗಳ ಹಲವು ಪ್ರಶ್ನೆಗಳಿಗೆ ಸಮರ್ಪಕ ಉತ್ತರಗಳನ್ನು ನೀಡಿದರು.

ಸೌಹಾರ್ದ ಅಭಿವೃದ್ಧಿ ಅಧಿಕಾರಿ ಬಸವರಾಜ ಎಸ್​., ಪ್ರತಿಭಾಮಠ, ಶಿವಕುಮಾರ ಬಿರಾದಾರ, ಮಲ್ಲಿನಾಥ ಪಾಟೀಲ, ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಪದವಿ, ಸಂಶೋಧನಾ ವಿದ್ಯಾರ್ಥಿನಿಯರು, ಸೌಹಾರ್ದ ಸಹಕಾರಿ ಸಂದ ಸದಸ್ಯರು, ಉಪಸ್ಥಿತರಿದ್ದರು.

ಸಂಗೀತ ವಿಭಾಗದ ವಿದ್ಯಾರ್ಥಿನಿಯರು ಅರ್ಥಪೂರ್ಣ ಗೀತೆಗಳನ್ನು ಹಾಡಿದರು. ವಿ.ಜೆ. ಕಾರಕೂನ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಆರ್​.ವಿ. ಗಂಗಾಶೆಟ್ಟಿ ಸ್ವಾಗತಿಸಿದರು, ಜಯಶ್ರೀ ಜೇರಟಗಿ, ಗಿರಿಜಾ ನವಲಿಮಠ ಅತಿಥಿಗಳನ್ನು ಪರಿಚಯಿಸಿದರು. ಶ್ವೇತಾ ಬಡಿಗೇರ ನಿರೂಪಿಸಿದರು. ಡಾ. ಸುರೇಶ ಕೆ.ಪಿ. ವಂದಿಸಿದರು.