ವಿಜಯವಾಣಿ ಸುದ್ದಿಜಾಲ ಸುಬ್ರಹ್ಮಣ್ಯ
ಕಡಬ ತಾಲೂಕಿನ ಬಳ್ಪದಲ್ಲಿರುವ ಭೋಗಾಯನ ಕೆರೆ ಕಾಯಕಲ್ಪಗೊಂಡಿದೆ. ಬಳ್ಪ ಗ್ರಾಮಕ್ಕೆ ಕಿರೀಟಪ್ರಾಯವಾಗಿರುವ ಈ ಪ್ರಾಚೀನ ಚಾರಿತ್ರಿಕ ಕೆರೆಯಲ್ಲಿ ವರ್ಷದ 365 ದಿನವೂ ಜಲ ಸಮೃದ್ಧಿಯಿರುತ್ತದೆ. ತನ್ನ ಒಡಲಾಳದಲ್ಲಿ ಭರಪೂರ ನೀರನ್ನು ತುಂಬಿಕೊಂಡು ನೀರಿನ ಕಣಜವೆನಿಸಿದೆ. ಬಿರು ಬೇಸಿಗೆಯ ಅವಧಿಯಲ್ಲೂ ಐತಿಹಾಸಿಕ ತಟಾಕದಲ್ಲಿ ನೀರು ನಳನಳಿಸುತ್ತಿದೆ.
ಹಳ್ಳಿಯ ಭತ್ತದ ಬೇಸಾಯಕ್ಕೆ ನೀರುಣಿಸುವ ಉದ್ದೇಶದಿಂದ ಅರಸರು ಈ ಕೆರೆ ನಿರ್ಮಿಸಿದ್ದರು. ಹಿಂದಿನ ಕಾಲದಲ್ಲಿ ಬಹು ದೂರದವರೆಗೂ ಇದ್ದ ಗದ್ದೆಗಳಿಗೆ ಈ ಕೆರೆಯಿಂದ ನೀರು ಪೂರೈಸಲಾಗುತ್ತಿತ್ತು. ಕೆಲವು ಅರಸರು ತಮ್ಮ ಶಾಸನದಲ್ಲಿ ಈ ಕೆರೆಯ ಉಪಯುಕ್ತತೆ ಬಗ್ಗೆ ಉಲ್ಲೇಖ ಮಾಡಿದ್ದಾರೆ. ಕೆರೆಯು ವಿಶಾಲವಾಗಿದ್ದು ಗ್ರಾಮದ ಎತ್ತರ ಭಾಗದಲ್ಲಿರುವುದರಿಂದ ಕೆರೆಯ ಕೆಳಗಿನ ಭಾಗದ ಭತ್ತದ ಗದ್ದೆಗಳಿಗೆ ಹಿಂದೆ ನೀರುಣಿಸುವ ಆಶ್ರಯವಾಗಿತ್ತು. ಆಗಿನಿಂದ ಈಗಿನ ತನಕವೂ ಬಿರು ಬೇಸಿಗೆಯಲ್ಲಿ ಸಮೃದ್ಧ ನೀರಿನೊಂದಿಗೆ ನಳನಳಿಸುತ್ತಿದೆ ಬೋಗಾಯನಕೆರೆ. ಕೆರೆಯ ನೀರಿನಿಂದಾಗಿ ಸುತ್ತಮುತ್ತಲಿನ ಪ್ರದೇಶದಲ್ಲಿ ಅಂತರ್ಜಲವೂ ವೃದ್ಧಿಸಿದೆ.
ರಾಜ್ಯ ಹೆದ್ದಾರಿ ಪಾರ್ಶ್ವದಲ್ಲಿ
ಸುಬ್ರಹ್ಮಣ್ಯ- ಮಂಜೇಶ್ವರ ರಾಜ್ಯ ಹೆದ್ಧಾರಿಯಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯದಿಂದ 12 ಕಿ.ಮೀ. ದೂರದ ಬಳ್ಪ ಪೇಟೆಯ ಪಕ್ಕದಲ್ಲಿ ರಸ್ತೆಗೆ ತಾಗಿಕೊಂಡೇ ಈ ಕೆರೆ ಇದೆ. ಸುತ್ತಲೂ ಪ್ರಶಾಂತ ಅರಣ್ಯ ಪರಿಸರ ಈ ಕೆರೆಯ ಸೌಂದರ್ಯ ಇಮ್ಮಡಿಗೊಳಿಸಿದೆ. ಇದೀಗ ಕೆರೆಯನ್ನು ಅಭಿವೃದ್ಧಿಗೊಳಿಸಲಾಗಿದ್ದು, ಕೆರೆಯ ಹೂಳು ತೆಗೆದು ಸುತ್ತಲೂ ಸುಂದರವಾದ ತಡೆಗೋಡೆ ನಿರ್ಮಿಸಲಾಗಿದೆ. ಇದರಿಂದ ಕೆರೆಗೆ ಮತ್ತೆ ಕಳೆ ಬಂದಿದೆ.
ಪ್ರವಾಸೋದ್ಯಮ ಅಭಿವೃದ್ಧಿಗೆ ಅವಕಾಶ
ಆರೇಳು ದಶಕಗಳ ಹಿಂದೆ ಗದ್ದೆ ಬೇಸಾಯಕ್ಕೆ ಕೆರೆ ನೀರನ್ನು ಉಪಯೋಗಿಸುತ್ತಿದ್ದರು. ಇದೀಗ ಕೃಷಿಕರು ಬೇರೆ ಬೇರೆ ಜಲಮೂಲಗಳ ಮೊರೆ ಹೋದ ಕಾರಣ ಭೋಗಾಯನ ಕೆರೆ ನೀರು ನೇರವಾಗಿ ಬಳಕೆ ಮಾಡುವುದು ನಿಂತೇ ಹೋಗಿದೆ. ಭವಿಷ್ಯದಲ್ಲಿ ಅಗತ್ಯ ಬಿದ್ದಾಗಲೆಲ್ಲ ಮೋಟಾರು ಪಂಪ್ ಮೂಲಕ ಟ್ಯಾಂಕಿಗೆ ನೀರು ತುಂಬಿಸಿ ಬಳ್ಪ ಗ್ರಾಮದ ಕೃಷಿ ಕಾರ್ಯಕ್ಕೆ ಕೆರೆ ನೀರು ಬಳಸಬಹುದು. ರಾಜ್ಯ ಹೆದ್ದಾರಿ ಪಕ್ಕದಲ್ಲಿ ಅತ್ಯಂತ ಪ್ರಶಾಂತ ಪರಿಸರದಲ್ಲಿ ಭೊಗಾಯನ ಕೆರೆ ಇರುವ ಕಾರಣ ಇಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಅವಕಾಶವಿದೆ.
ಬೋಗಾಯನ ಕೆರೆ ಸುಂದರ ತಾಣವಾಗಿದೆ. ಬಳ್ಪದಲ್ಲಿರುವ ಈ ಪ್ರಾಚೀನ ಕೆರೆಯು 365 ದಿನವೂ ನೀರನ್ನು ತನ್ನ ಒಡಲಾಳದಲ್ಲಿ ತುಂಬಿಕೊಂಡಿರುತ್ತದೆ. ಕೆರೆಯಲ್ಲಿನ ನೀರಿನಿಂದಾಗಿ ಸುತ್ತಮುತ್ತಲಿನ ಪ್ರದೇಶದಲ್ಲಿ ಅಂತರ್ಜಲ ವೃದ್ಧಿಯಾಗಿದೆ. ಈ ಕೆರೆಯನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಿದರೆ ಉತ್ತಮ. ನಾಗೇಶ್ ಸಂಪ್ಯಾಡಿ ಬಳ್ಪ, ಸ್ಥಳೀಯರು