ಜಿಲ್ಲೆ

ವಿದ್ಯಾರ್ಥಿಗಳ ಭವಿಷ್ಯದ ಕನಸು ನನಸು : ಡಾ.ಸದಾಕಾತ್ ಭರವಸೆ

ಸೌಮ್ಯ ಆರ್

ಮೂಡುಬಿದಿರೆ: ಕಟ್ಟಕಡೆಯ ವಿದ್ಯಾರ್ಥಿಗೂ ಸಮಾನ ಅವಕಾಶ ಒದಗಿಸುವುದು ಆಳ್ವಾಸ್‌ನ ಗುರಿ. ವಿದ್ಯಾರ್ಥಿಗಳ ಭವಿಷ್ಯದ ಕನಸುಗಳನ್ನು ನನಸಾಗಿಸಲು ಆಳ್ವಾಸ್ ಸದಾ ಜತೆಯಾಗಿ ನಿಲ್ಲಲಿದೆ. ಇದಕ್ಕಾಗಿ ಆಡಳಿತ ವರ್ಗ, ಶಿಕ್ಷಕರು, ಶಿಕ್ಷಕೇತರ ವೃಂದ, ಪಾಲಕರು ಮತ್ತು ವಿದ್ಯಾರ್ಥಿಗಳು ಜತೆಗೂಡಿ ಕಾರ್ಯನಿರ್ವಹಿಸಬೇಕು ಎಂದು ಆಳ್ವಾಸ್ ಪಿಯು ಕಾಲೇಜಿನ ಪ್ರಾಂಶುಪಾಲ ಡಾ.ಸದಾಕಾತ್ ಹೇಳಿದರು.

ವಿದ್ಯಾಗಿರಿಯ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ನಡೆದ ಪಿಯು(ವಿಜ್ಞಾನ) ಪ್ರಥಮ ವರ್ಷದ ವಿದ್ಯಾರ್ಥಿಗಳ ಅಭಿವಿನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಆಳ್ವಾಸ್‌ನಲ್ಲಿ ಪ್ರತಿ ವಾರಕ್ಕೊಮ್ಮೆ ಕಲ್ಪಿತ ಪರೀಕ್ಷೆ ಮೂಲಕ ವಿದ್ಯಾರ್ಥಿಗಳ ಕಲಿಕಾ ಪ್ರಕ್ರಿಯೆ ವೃದ್ಧಿಸಲಾಗುವುದು. ವಿದ್ಯಾರ್ಥಿಗಳ ಕ್ಷೇಮ ಪಾಲನೆಗೆ ಪ್ರತ್ಯೇಕ ಅಧಿಕಾರಿ ವರ್ಗವಿದೆ. ಸ್ಪರ್ಧಾತ್ಮಕ ಪರೀಕ್ಷೆಗಳ ದೃಷ್ಟಿಯಿಂದ ಸಂಯೋಜಿತ ಪಠ್ಯ ಬೋಧನೆ ಅಳವಡಿಸಲಾಗಿದ್ದು, ಪಠ್ಯ ಚಟುವಟಿಕೆ ಪೂರ್ಣಗೊಂಡ ನಂತರ ಮರುಮನನ ತರಗತಿಗಳನ್ನು ನಡೆಸಲಾಗುವುದು. ವಿದ್ಯಾರ್ಥಿಗಳು ಯಾವುದೇ ಭಯವಿಲ್ಲದೆ ಸಮಸ್ಯೆಗಳನ್ನು ಶಿಕ್ಷಕರೊಂದಿಗೆ ಪರಿಹರಿಸಿಕೊಳ್ಳಬಹುದು ಎಂದರು.

ಪಿಯು ಒಂದನೇ ಶೈಕ್ಷಣಿಕ ಬ್ಲಾಕ್‌ನ ಮುಖ್ಯಸ್ಥೆ ಜ್ಯೋತಿ ಎಂ.ಎನ್, ಎರಡನೇ ಬ್ಲಾಕ್‌ನ ಮುಖ್ಯಸ್ಥ ಕುಮಾರ್ ಎನ್, ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲೆ ಜಾನ್ಸಿ ಪಿ.ಎನ್. ಉಪಸ್ಥಿತರಿದ್ದರು. ಇಂಗ್ಲಿಷ್ ಉಪನ್ಯಾಸಕ ರಾಜೇಶ್ ಡಿಸೋಜ ನಿರೂಪಿಸಿದರು.