ಜಿಲ್ಲೆ

ಕಾರ್ಮಿಕ ಮಾರಕ ಕಾಯ್ದೆ ಕೈಬಿಡಿ

ಇಂದಿರಾ ಎನ್ ಕೆ

ಕುಂದಾಪುರ: ಕೇಂದ್ರ ಸರ್ಕಾರ ಶ್ರೀಮಂತ ಉದ್ದಿಮೆದಾರರ ಪರ ನೀತಿ ರೂಪಿಸುವ ಮೂಲಕ ಕಾರ್ಮಿಕರನ್ನು ಶೋಷಿಸುತ್ತಿದೆ. ಕಾರ್ಮಿಕ ವರ್ಗಕ್ಕೆ ಮಾರಕವಾದ ಕಾಯ್ದೆಗಳ ತಿದ್ದುಪಡಿಯನ್ನು ಕೇಂದ್ರ ಕೈ ಬಿಡಬೇಕು ಎಂದು ಸಿಐಟಿಯು ಕುಂದಾಪುರ ತಾಲೂಕು ಸಂಚಾಲಕ ಚಂದ್ರಶೇಖರ್ ವಿ.ಒತ್ತಾಯಿಸಿದರು.

ಕುಂದಾಪುರದ ಹೆಂಚು ಕಾರ್ಮಿಕ ಸಂಘದಲ್ಲಿ ಭಾನುವಾರ ಉಡುಪಿ ಜಿಲ್ಲಾ ಹೆಂಚು ಕಾರ್ಮಿಕರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು.

ಸಂಘದ ಅಧ್ಯಕ್ಷ ವಿ.ನರಸಿಂಹ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಎಚ್.ನರಸಿಂಹ ವಾರ್ಷಿಕ ಕರಡು ವರದಿ ಹಾಗೂ ಲೆಕ್ಕಪತ್ರ ವರದಿ ಮಂಡಿಸಿದರು.

ಕುಂದಾಪುರ ಇಎಸ್‌ಐಗೆ ಕಾಯಂ ವೈದ್ಯರ ನೇಮಕಾತಿ ಹಾಗೂ ಬ್ರಹ್ಮಾವರದಲ್ಲಿ 100 ಹಾಸಿಗೆಗಳ ಆಸ್ಪತ್ರೆ ಶೀಘ್ರ ತೆರೆಯಲು, ಬೆಲೆ ಏರಿಕೆ, ಪಿಂಚಣಿ ಹೆಚ್ಚಳಕ್ಕೆ ಆಗ್ರಹ, ಆವೆ ಮಣ್ಣಿನ ಸರಬರಾಜಿಗೆ ಆಕ್ಷೇಪ ಹಿಂಪಡೆಯುವಿಕೆ ಸಹಿತ ವಿವಿಧ ವಿಷಯಗಳ ಕುರಿತು ನಿರ್ಣಯ ಅಂಗೀಕರಿಸಲಾಯಿತು. ಸಿಐಟಿಯು ಜಿಲ್ಲಾಧ್ಯಕ್ಷ ಕೆ.ಶಂಕರ್, ಬೀಡಿ ಕಾರ್ಮಿಕ ಸಂಘದ ಮುಖಂಡ ಮಹಾಬಲ ವಡೇರಹೋಬಳಿ ಮಾತನಾಡಿದರು. ಸಿಐಟಿಯು ಮುಖಂಡ ಬಲ್ಕಿಸ್ ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಜತೆ ಕಾರ್ಯದರ್ಶಿ ಸುರೇಂದ್ರ ವಂದಿಸಿದರು.