ಮೂಡುಬಿದಿರೆ: ತಂತ್ರಜ್ಞಾನದ ಅತಿ ಬಳಕೆಯಿಂದ ಮಕ್ಕಳಲ್ಲಿ ಬಾಲ್ಯದ ನಂಟು ಕಡಿಮೆಯಾಗಿ ನೈತಿಕತೆ ಕ್ಷೀಣಿಸುತ್ತಿದೆ. ಪ್ರಕೃತಿಯೊಂದಿಗೆ ಬೆರೆಯುವ ನಮ್ಮ ಪರಂಪರೆಯನ್ನು ತಿಳಿಹೇಳುವ ಕೆಲಸ ಹಿರಿಯರಿಂದಾಗಬೇಕು. ಆಟಿ ಕೂಟದಂತಹ ಕಾರ್ಯಕ್ರಮಗಳಿಂದ ತುಳುನಾಡಿನ ಸಂಸ್ಕೃತಿ ಯುವಜನತೆಗೆ ಪರಿಚಯವಾಗುತ್ತದೆ ಎಂದು ಗೀತಾ ಸಾಹಿತ್ಯ ಸಂಭ್ರಮದ ರೂವಾರಿ ವಿಠಲ್ ನಾಯ್ಕ ಕಲ್ಲಡ್ಕ ಹೇಳಿದರು.
ನಾಗರಕಟ್ಟೆಯ ರುಕ್ಮಿಣಿ ವಾಸುದೇವ ವಠಾರದಲ್ಲಿ ನಡೆದ ಆಟಿದ ಕೂಟ 2025 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ತುಳು ರಂಗ, ಸಿನಿಮಾ ಕಲಾವಿದ ಪ್ರಸನ್ನ ಶೆಟ್ಟಿ ಬೈಲೂರು ಹಾಗೂ ವಿಠಲ್ ನಾಯ್ಕ ಪುತ್ತೂರು ಅವರನ್ನು ಸನ್ಮಾನಿಸಲಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಸುಹಾಸ್ ಹಾಗೂ ಸ್ವಸ್ತಿ ಅವರನ್ನು ಗೌರವಿಸಲಾಯಿತು.
ಉದ್ಯಮಿಗಳಾದ ದಿವಾಕರ ಶೆಟ್ಟಿ ತೋಡಾರು, ಶೋಭಿತ್ ಶೆಟ್ಟಿ, ಪ್ರಮುಖರಾದ ವಿದ್ಯಾ ಕುಮಾರ್ ಭಟ್, ಸುಪ್ರಿತಾ ಸುಧಾಕರ ಶೆಟ್ಟಿ ಉಪಸ್ಥಿತರಿದ್ದರು. ಶಂಕರ್ ಕೋಟ್ಯಾನ್ ಸ್ವಾಗತಿಸಿದರು. ಸೌಮ್ಯಾ ಕಾರ್ಯಕ್ರಮ ನಿರೂಪಿಸಿದರು. ವಿಶ್ವ ಕುಮಾರ್ ಭಟ್ ವಂದಿಸಿದರು.