ಜಿಲ್ಲೆ

ಜನರ ಮನೆಬಾಗಿಲಿಗೆ ಸೇವೆ ತಲುಪಿಸುವುದು ಶ್ಲಾಘನೀಯ : ಹಿರಿಯ ಅಂಚೆ ಅಧೀಕ್ಷಕ ಎಂ.ಸುಧಾಕರ ಮಲ್ಯ ಮೆಚ್ಚುಗೆ

ಸೌಮ್ಯ ಆರ್

ಕಿನ್ನಿಗೋಳಿ: ಪುನರೂರು ಪ್ರತಿಷ್ಠಾನದ ಆಶ್ರಯದಲ್ಲಿ ಹಾಗೂ ಜನವಿಕಾಸ ಸಮಿತಿ ಮೂಲ್ಕಿ ಸಹಕಾರದಲ್ಲಿ ಭಾರತೀಯ ಅಂಚೆ ಇಲಾಖೆ ಸಹಯೋಗದೊಂದಿಗೆ, ಶಿಮಂತೂರಿನ ಶ್ರೀ ಶಾರದಾ ಸೆಂಟ್ರಲ್ ಸ್ಕೂಲ್‌ನಲ್ಲಿ, ಅಂಚೆ ಜನಸಂಪರ್ಕ ಅಭಿಯಾನ ಹಾಗೂ ಆಧಾರ್ ನೋಂದಣಿ ಮತ್ತು ಪರಿಷ್ಕರಣಾ ಉಚಿತ ಶಿಬಿರ ನಡೆಯಿತು.

ಹಿರಿಯ ಅಂಚೆ ಅಧೀಕ್ಷಕ ಎಂ.ಸುಧಾಕರ ಮಲ್ಯ ಶಿಬಿರ ಉದ್ಘಾಟಿಸಿ ಮಾತನಾಡಿ, ಸೇವೆಗಳು ಜನರ ಬಾಗಿಲಿಗೆ ಬಂದು ತಲುಪುವುದು ಒಂದು ಮಹತ್ವದ ಹೆಜ್ಜೆ. ಆಧಾರ್ ಕಾರ್ಡ್ ಇಂದು ಪ್ರತಿಯೊಬ್ಬರಿಗೂ ಅಗತ್ಯ. ಬ್ಯಾಂಕ್ ವ್ಯವಹಾರ, ಸರ್ಕಾರಿ ಯೋಜನೆಗಳು, ವಿದ್ಯಾರ್ಥಿವೇತನ, ಪಿಂಚಣಿ, ಎಲ್ಲ ಕಡೆಗಳಿಗೆ ಇದೊಂದು ಅವಶ್ಯ ದಾಖಲೆಯಾಗಿದೆ ಎಂದರು.

ಪುನರೂರು ಪ್ರತಿಷ್ಠಾನದ ಗೌರವಾಧ್ಯಕ್ಷ ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದರು. ಶಿಮಂತೂರಿನ ಶ್ರೀ ಶಾರದಾ ಸೊಸೈಟಿ ಕಾರ್ಯದರ್ಶಿ ಪುರಂದರ ಶೆಟ್ಟಿಗಾರ್, ನಿರ್ದೇಶಕ ಸುರೇಶ್ ರಾವ್ ನಿರಳಿಕೆ, ಶ್ರೀ ಶಾರದಾ ಸೆಂಟ್ರಲ್ ಸ್ಕೂಲ್ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷೆ ಸುಮನಾ, ಜನವಿಕಾಸ ಸಮಿತಿ ಮೂಲ್ಕಿಯ ಅಧ್ಯಕ್ಷೆ ಅಕ್ಷತಾ ಶೆಟ್ಟಿ, ಸದಸ್ಯರಾದ ಆನಂದ ಮೇಲಂಟ, ಶಶಿಕರ ಕೆರೆಕಾಡು, ದಾಮೋದರ ಶೆಟ್ಟಿ ಕೊಡೆತ್ತೂರು, ಶೋಭಾ ರಾವ್, ಗೀತಾ ಶೆಟ್ಟಿ ಉಪಸ್ಥಿತರಿದ್ದರು.

ಹೊಸ ಆಧಾರ್ ನೋಂದಣಿ, ಹೆಸರು ತಿದ್ದುಪಡಿ, ವಿಳಾಸ ಬದಲಾವಣೆ, ಜನ್ಮ ದಿನಾಂಕ ತಿದ್ದುಪಡಿ, ಮೊಬೈಲ್ ನಂಬರ್ ಹಾಗೂ ಇತರ ಸೇವೆ ಉಚಿತವಾಗಿ ಒದಗಿಸಲಾಯಿತು. ಅಂಚೆ ಇಲಾಖೆಯ ವಿಮೆ ಸೇವೆ ಸ್ಥಳದಲ್ಲೇ ನೀಡಲಾಯಿತು. ಒಟ್ಟು 115 ಕ್ಕೂ ಅಧಿಕ ಜನರು ಶಿಬಿರದ ಮೂಲಕ ಸೇವೆ ಪಡೆದರು.

ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ್ ಪುನರೂರು ಪ್ರಸ್ತಾವನೆಗೈದು, ಸ್ವಾಗತಿಸಿದರು. ಜನವಿಕಾಸ ಸಮಿತಿ ಮೂಲ್ಕಿಯ ಸದಸ್ಯ ಪ್ರಾಣೇಶ್ ಭಟ್ ಡೆಂದಡ್ಕ ವಂದಿಸಿದರು. ಶಾಲಾ ಪ್ರಾಚಾರ್ಯ ಜಿತೇಂದ್ರ ವಿ.ರಾವ್ ನಿರೂಪಿಸಿದರು.