ಜಿಲ್ಲೆ

ಬೆಳಗಾವಿಯಲ್ಲಿ ಯುವತಿ ಅನುಮಾನಾಸ್ಪದ ಸಾವು: ಆಕೆಯನ್ನ ಆಸ್ಪತ್ರೆಗೆ ಕರೆತಂದ ಯುವಕ ಪರಾರಿ...

ಬೆಳಗಾವಿ: ನಗರದಲ್ಲಿ 19 ವರ್ಷದ ಯುವತಿಯೊಬ್ಬಳು ಮೃತಪಟ್ಟಿದ್ದು, ಸಾವಿನ ಸುತ್ತ ಅನುಮಾದ ಹುತ್ತ ಬೆಳೆದಿದೆ. ದುಷ್ಕರ್ಮಿಗಳು ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾರೆಂದು ಮೃತಳ ಕುಟುಂಬಸ್ಥರು ಆರೋಪಿಸಿದ್ದಾರೆ.

ಬೈಲಹೊಂಗಲ ಪಟ್ಟಣ ಮೂಲದ ಯುವತಿ, ಒಂದು ತಿಂಗಳಿಂದ ಬೆಂಗಳೂರಿನ ಕಾಲ್​ಸೆಂಟರ್​ನಲ್ಲಿ ಕೆಲಸ ಮಾಡುತ್ತಿದ್ದಳು. ಬುಧವಾರ ಬೆಳಗಾವಿ ಜಿಲ್ಲಾಸ್ಪತ್ರೆಗೆ ಯುವಕನೊಬ್ಬನು ಆಕೆಯನ್ನು ಚಿಕಿತ್ಸೆಗೆ ದಾಖಲಿಸಿದ್ದು, ಆಸ್ಪತ್ರೆಯ ಸಿಬ್ಬಂದಿ ಎಂಎಲ್​ಸಿ ಮಾಡ್ತೀವಿ ಅನ್ನುತ್ತಿದ್ದಂತೆ ಯುವತಿಯ ಮೊಬೈಲ್​ನೊಂದಿಗೆ ಆತ ಪರಾರಿಯಾಗಿದ್ದಾನೆ. ಆದರೆ, ಆತ ಯಾರು? ಎಂಬುದು ತಿಳಿದು ಬಂದಿಲ್ಲ.

ಕುಟುಂಬಸ್ಥರು ಆಸ್ಪತ್ರೆಗೆ ಆಗಮಿಸಿದ ವೇಳೆ ಯುವತಿ ನಿತ್ರಾಣ ಸ್ಥಿತಿಯಲ್ಲಿದ್ದಳು. ಅವಳ ತಲೆಯ ಹಿಂಬದಿಯಲ್ಲಿ ಗಾಯದ ಗುರುತು ಪತ್ತೆಯಾಗಿದೆ. ಮೈಯಲ್ಲಿ ಸಿಗರೇಟ್​ನಿಂದ ಸುಟ್ಟಿರುವ ಗಾಯಗಳಿವೆ. ಕೂಡಲೇ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಗುರುವಾರ ಯುವತಿ ಮೃತಪಟ್ಟಿದ್ದಾಳೆ.

ನಮ್ಮ ಮಗಳನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾರೆ. ಕೂಡಲೇ ತನಿಖೆ ನಡೆಸಿ ದುಷ್ಕರ್ಮಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.