ಬೆಂಗಳೂರು: ಅಶ್ಲೀಲ ವಿಡಿಯೋ ತೋರಿಸಿ ಅದರಂತೆಯೇ ಲೈಂಗಿಕ ಕ್ರಿಯೆಗೆ ಸಹಕರಿಸು ಎಂದು ಪೀಡಿಸುತ್ತಾ ಪದೇಪದೆ ಕಿರುಕುಳ ಕೊಡುತ್ತಿದ್ದ ಪತಿಯ ವಿರುದ್ಧ ಬಸವನಗುಡಿ ಮಹಿಳಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ ವಿವಾಹಿತ ಮಹಿಳೆ.
ನಾಗರಬಾವಿ 2ನೇ ಹಂತದ 36 ವರ್ಷದ ಮಹಿಳೆ ಕೊಟ್ಟ ದೂರಿನ ಆಧಾರದ ಮೇಲೆ ಬಸವನಗುಡಿ ಮಹಿಳಾ ಠಾಣೆ ಪೊಲೀಸರು ಉದ್ಯಮಿ ರವಿ (47) ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಈ ದೂರಿನಲ್ಲಿ ಮಹಿಳೆಯು ತನ್ನ ಗಂಡನ ಕರಾಳ ಮುಖವನ್ನ ಬಿಚ್ಚಿಟ್ಟಿದ್ದಾಳೆ. ಅಷ್ಟೇ ಅಲ್ಲ, ತಾನು ಅನುಭವಿಸಿದ ನೋವನ್ನೂ ವಿವರಿಸಿದ್ದಾರೆ.
2000ರಲ್ಲಿ ಉದ್ಯಮಿ ರವಿ ಜತೆ ದೂರುದಾರ ಮಹಿಳೆ ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಈ ನಡುವೆ ಐಪಿಎಲ್ ಬೆಟ್ಟಿಂಗ್ ಹಾಗೂ ಇಸ್ಪೀಟ್ ಚಟ ಅಂಟಿಸಿಕೊಂಡಿದ್ದ ರವಿ, ವಿವಾಹ ಸಂದರ್ಭದಲ್ಲಿ ಪತಿಗೆ ಪತ್ನಿ ಮನೆಯವರು ನೀಡಿದ್ದ ಚಿನ್ನಾಭರಣ ಹಾಗೂ ಪತ್ನಿ ಕೆಲಸ ಮಾಡಿ ಉಳಿತಾಯ ಮಾಡಿದ್ದ 5 ಲಕ್ಷ ರೂಪಾಯಿಯನ್ನು ಐಪಿಎಲ್ ಬೆಟ್ಟಿಂಗ್ ಹಾಗೂ ಇಸ್ಪೀಟ್ ಆಟಕ್ಕೆ ಬಳಸಿ ಕಳೆದುಕೊಂಡಿದ್ದ. ಸಣ್ಣ-ಪುಟ್ಟ ವಿಚಾರಕ್ಕೆ ಪತ್ನಿಯ ಮೇಲೆ ಹಲ್ಲೆ ನಡೆಸುತ್ತಿದ್ದ. ಕುಟುಂಬದ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಂಡಿರಲಿಲ್ಲ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಅಷ್ಟೇ ಅಲ್ಲ, ಆರೋಪಿಯು ಅಶ್ಲೀಲ ವಿಡಿಯೋವನ್ನು ಆಗಾಗ ಪತ್ನಿಗೆ ತೋರಿಸಿ ಆ ವಿಡಿಯೋದಲ್ಲಿ ಇರುವಂತೆ ನೀನು ನನ್ನೊಂದಿಗೆ ಲೈಂಗಿಕ ಕ್ರಿಯೆಗೆ ಸಹಕರಿಸಬೇಕು ಎಂದು ಕಿರುಕುಳ ನೀಡುತ್ತಿದ್ದ. ಇದಕ್ಕೆ ಪತ್ನಿ ನಿರಾಕರಿಸಿದಾಗ ತವರು ಮನೆಯಿಂದ ವರದಕ್ಷಿಣೆ ತರುವಂತೆ ಬೆದರಿಸುತ್ತಿದ್ದ. ಯಲಹಂಕದಲ್ಲಿ ಪತ್ನಿ ಹೆಸರಿನಲ್ಲಿರುವ ನಿವೇಶನವನ್ನು ತನ್ನ ಹೆಸರಿಗೆ ಬರೆದುಕೊಡುವಂತೆ ಹಿಂಸೆ ಕೊಡುತ್ತಿದ್ದ. ತಾನು ಹೇಳುವ ದಾಖಲೆಗಳಿಗೆ ಸಹಿ ಹಾಕದಿದ್ದರೆ ಕೊಲೆ ಮಾಡುವುದಾಗಿ ಬೆದರಿಸುತ್ತಿದ್ದ ಎಂದು ದೂರಿನಲ್ಲಿ ಹೇಳಲಾಗಿದೆ. ಪತಿಯ ಹಿಂಸೆಯಿಂದ ಬೇಸತ್ತ ಪತ್ನಿ ನೊಂದು ನ್ಯಾಯಕ್ಕಾಗಿ ಬಸವನಗುಡಿ ಠಾಣೆಯ ಮೆಟ್ಟಿಲೇರಿದ್ದಾಳೆ.