ಜಿಲ್ಲೆ

ಮತ್ತೆ ಸದ್ದು ಮಾಡಿದ ಕೊತ್ವಾಲ್​ಪುರ, ಕೊತ್ವಾಲ್​ ರಾಮಚಂದ್ರನ ಶಿಷ್ಯರು! ಕಾಂಗ್ರೆಸ್​-ಬಿಜೆಪಿಯಲ್ಲಿ ಕೊತ್ವಾಲ್​ ಶಿಷ್ಯರು?

arunakunigal

ಬೆಂಗಳೂರು: ಶಕ್ತಿಸೌಧದಲ್ಲಿ ಸಚಿವ ಈಶ್ವರಪ್ಪ ವಿರದ್ಧ ಕಾಂಗ್ರೆಸ್​ ಅಹೋರಾತ್ರಿ ಧರಣಿ ಭಾರೀ ಸದ್ದು ಮಾಡುತ್ತಿದೆ. ಇದರ ನಡುವೆಯೇ ಕೊತ್ವಾಲ್​ಪುರ ಮತ್ತು ಕೊತ್ವಾಲ್​ ರಾಮಚಂದ್ರನ ಶಿಷ್ಯರು... ಪದವೂ ಸದ್ದು ಮಾಡುತ್ತಿದೆ.

ಕೊತ್ವಾಲ್ ರಾಮಚಂದ್ರನ ಶಿಷ್ಯರು ಕಾಂಗ್ರೆಸ್​ನಲ್ಲಿದ್ದಾರೆ ಎಂಬ ಹೇಳಿಕೆ ರಾಜಕೀಯ ದುರುದ್ದೇಶದ್ದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಗರಂ ಆದರು. ವಿಧಾನಸೌಧ ಮೊಗಸಾಲೆಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ರಾಮಲಿಂಗಾರೆಡ್ಡಿ, ನಾನು ಕಾಂಗ್ರೆಸ್​ಗೆ ಬಂದು 40 ವರ್ಷ ಆಗಿದೆ. ಕೊತ್ವಾಲ್ ರಾಮಚಂದ್ರ ತೀರಿಕೊಂಡು 40 ವರ್ಷಗಳಾಗಿವೆ. ಕೊತ್ವಾಲ್ ಮೂಲತಃ ಶಿವಮೊಗ್ಗ ಜಿಲ್ಲೆಯವರು. ಅವರ ಶಿಷ್ಯಂದಿರೇ ಬಿಜೆಪಿಯಲ್ಲಿದ್ದಾರೆ. ಈ ಹಿಂದೆ ಗಡಿಪಾರಾಗಿದ್ದವರು ಈಗ ಕೇಂದ್ರದಲ್ಲಿ ಗೃಹ ಸಚಿವರಾಗಿದ್ದಾರೆ. ಸಿ.ಟಿ.ರವಿಗೆ ಧೈರ್ಯವಿದ್ದರೆ ಅವರ ಬಗ್ಗೆ ಮಾತಾಡಲಿ ಎಂದು ಕೆಣಕಿದರು.

ಗುರುವಾರ ಕಲಾಪದಲ್ಲಿ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್​ ಅವರು ರಾಷ್ಟ್ರದ ಇತಿಹಾಸ, ಪ್ರಸ್ತುತ ವಿದ್ಯಮಾನ ಪ್ರಸ್ತಾಪಿಸುತ್ತಾ ಆರ್​ಎಸ್​ಎಸ್​, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವ್ಯಂಗ್ಯ ಪದ ಪ್ರಯೋಗ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಬಿಜೆಪಿಯ ಆಯನೂರು ಮಂಜುನಾಥ್​, ಪ್ರಚೋದನಕಾರಿ ಮಾತು ನಮಗೂ ಬರುತ್ತೆ. ಬುಧವಾರ ನೀವು ಹಾವಿನಪುರವೆಂದಿರಿ, ನಾನು ಕೊತ್ವಾಲ್​ಪುರ ಎನ್ನಬಲ್ಲೇ ಎನ್ನುತ್ತಿದ್ದಂತೆ ಕೈ ಸದಸ್ಯರು ಏಕಕಾಲಕ್ಕೆ ಎದ್ದು ನಿಂತು ಆಕ್ಷೇಪಿಸಿದ್ದರು. ಹರಿಪ್ರಸಾದ್​ ಮತ್ತು ಆಯನೂರು ಮಂಜುನಾಥ್​ ನಡುವಿನ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿತ್ತು.

"ಕೊತ್ವಾಲ್​ಪುರದ ಶಿಷ್ಯ, ಚಮಚಾಗಿರಿ, ಕಂಡವರ ಮನೆ ಬಾಗಿಲು ಕಾಯ್ದು ರಾಜಕೀಯ ಸ್ಥಾನಮಾನ ಗಿಟ್ಟಿಸಿಕೊಂಡವನಲ್ಲ. ತಾಕತ್ತಿದ್ದರೆ ಚುನಾವಣೆಗೆ ಸ್ಪರ್ಧಿಸಿ ಗೆದ್ದು ಬಾ'' ಎಂದು ಆಯನೂರು ಏರಿದ ಧ್ವನಿಯಲ್ಲಿ ಸವಾಲೆಸೆದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಹರಿಪ್ರಸಾದ್, ''ಕೊತ್ವಾಲ್​ಪುರ ಬೆಳೆಯುವುದಕ್ಕೆ ಶಿವಮೊಗ್ಗದವರೇ ಕಾರಣ'' ಎಂದು ದೂರಿದ್ದರು. ಈ ಹಿಂದೆ ಹಲವು ಬಾರಿ ಸಿ.ಟಿ.ರವಿ, ''ನಾನು ಕೊತ್ವಾಲ್​ ಚೇಲಾ ಅಲ್ಲ'' ಎಂದು ಡಿಕೆಶಿ ವಿರುದ್ಧ ಹರಿಹಾಯ್ದಿದ್ದರು.