ಜಿಲ್ಲೆ

ಇನ್ಮುಂದೆ ಕರೊನಾ ಸೋಂಕಿತರ ಮನೆ ಮುಂದೆ ಹಾರಾಡಲಿದೆ ಬಿಳಿ ಬಾವುಟ, ತೆಗೆದವರ ವಿರುದ್ಧ ಎಫ್​ಐಆರ್!

ಮೈಸೂರು: ಇನ್ಮುಂದೆ ಕರೊನಾ ಸೋಂಕಿತರ ಮನೆ ಮುಂದೆ 'ಕೋವಿಡ್​-19' ಎಂದು ಕಪ್ಪು ಮತ್ತು ಕೆಂಪು ಬಣ್ಣದಲ್ಲಿ ಬರೆದ ಅಕ್ಷರವುಳ್ಳ ಬಿಳಿ ಬಾವುಟ ಇರಲಿದೆ. ಇದನ್ನು ಆ ಮನೆಯವರು ತೆಗೆಯುವಂತಿಲ್ಲ. ಅಪ್ಪಿತಪ್ಪಿ ತೆಗೆದರೆ ಅವರ ವಿರುದ್ಧ ಎಫ್​ಐಆರ್ ದಾಖಲಾಗುತ್ತೆ!

ತಮ್ಮ ಮನೆಯಲ್ಲಿ ಸೋಂಕಿತರಿದ್ದರೂ ತರಕಾರಿ, ದಿನಬಳಕೆ ವಸ್ತುಗಳ ಖರೀದಿಗೆ ಕುಟುಂಬಸ್ಥರು ಹೊರಗಡೆ ಓಡಾಡುತ್ತಾರೆ. ಪಕ್ಕದ ಮನೆಯವರಿಗೂ ಗೊತ್ತಾಗದಂತೆ ಸೋಂಕಿತರು ಗೌಪ್ಯತೆ ಕಾಯ್ದುಕೊಳ್ಳುತ್ತಿದ್ದಾರೆ. ಪರಿಣಾಣ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಸೋಂಕಿತರ ಮನೆ ಮುಂದೆ ವಾರ್ಡ್‌ವಾರು ಟಾಸ್ಕ್ ಫೋರ್ಸ್ ಟೀಂ ಬಾವುಟ ಹಾಕಲಿದೆ. ಆಗ ಸೋಂಕಿತರ ಮನೆ ಗುರುತಿಸೋದು ಸುಲಭ. ಹಾಗೂ ಅಕ್ಕಪಕ್ಕದ ನಿವಾಸಿಗಳೂ ಜಾಗ್ರತೆ ವಹಿಸಲಿದ್ದಾರೆ. 14 ದಿನಗಳ ಬಳಿಕ ಸ್ವಯಂ ವಾರ್ಡ್‌ವಾರು ಟಾಸ್ಕ್ ಫೋರ್ಸ್ ಟೀಂ ಬಂದು ಆ ಬಾವುಟವನ್ನು ತೆರವು ಮಾಡಲಿದೆ.

ಇಂತಹ ವಿನೂತನ ಪ್ರಯತ್ನ ಮೈಸೂರಿನಲ್ಲಿ ಜಾರಿಯಾಗಿದೆ. ರಾಜಾರಾಮ ಅಗ್ರಹಾರದಲ್ಲಿ ಸೋಂಕಿತರ ಮನೆ ಮುಂದೆ ಕೋವಿಡ್​ ಬಾವುಟ ಕಟ್ಟುವ ಕಾರ್ಯಕ್ಕೆ ಶಾಸಕ ಎಸ್.ಎ.ರಾಮದಾಸ್ ಇಂದು(ಶನಿವಾರ) ಚಾಲನೆ ನೀಡಿದರು.

ಜತೆಗೆ ಕರೊನಾ ಸೋಂಕಿತರ ಮನೆಗೆ ಅರಿಶಣ, ಟೆಪ್ರೇಚರ್​ ಅಳೆಯುವ ಮಾಪಕ, ವಿಟಮಿನ್​ ಮಾತ್ರೆಗಳುಳ್ಳ ಕಿಟ್​ ಅನ್ನು ರಾಮದಾಸ್​ ವಿತರಿಸಿ ಕರೊನಾ ನಿಯಮ ಪಾಳಿಸುಂತೆ ಮನವಿ ಮಾಡಿದರು. ಏರಿಯಾಕ್ಕೆ ಸ್ಯಾನಿಟೈಸ್​ ಮಾಡಲಾಯಿತು. (ದಿಗ್ವಿಜಯ ನ್ಯೂಸ್)