ಜಿಲ್ಲೆ

ಹಳಿಯಾಳದ ಗ್ರಾಮವೊಂದರಲ್ಲಿ ನಡೆಯಿತು ವಿಶಿಷ್ಟ ಭಾವೈಕ್ಯ ಘಟನೆ

ಹಳಿಯಾಳ: ಮುಸ್ಲಿಂ ವ್ಯಕ್ತಿಯೊರ್ವ ನಿಧನ ಹೊಂದಿದ್ದರಿಂದ ಹಿಂದು ಸಮಾಜದವರು ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆ ಕಾರಣ ಆಯೋಜಿಸಿದ್ದ ಎಲ್ಲ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಭಾವೈಕ್ಯತೆ ಮತ್ತು ಸೌಹಾರ್ದತೆ ಮೆರೆದ ಘಟನೆ ಹಳಿಯಾಳ ತಾಲೂಕಿನಲ್ಲಿ ಸೋಮವಾರ ನಡೆದಿದೆ.

ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮ ಲಲ್ಲಾನ ಮೂರ್ತಿ ಪ್ರಾಣಪ್ರತಿಷ್ಠಾಪನೆ ಹಿನ್ನೆಲೆ ದೇಶದೆಲ್ಲೆಡೆ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಹಳಿಯಾಳ ತಾಲೂಕಿನಲ್ಲಿಯೂ ಕೂಡ ಅತ್ಯಂತ ಸಂಭ್ರಮ ಸಡಗರದಿಂದ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಅದರಂತೆ ತಾಲೂಕಿನ ತೆಗ್ನಳ್ಳಿ ಗ್ರಾಮದಲ್ಲಿಯೂ ಗ್ರಾಮಸ್ಥರು ವಿವಿಧ ಕಾರ್ಯಕ್ರಮಗಳು, ಶೋಭಾಯಾತ್ರೆ ಹಾಗೂ ಸಾಯಂಕಾಲ ಸಾರ್ವಜನಿಕ ಅನ್ನಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಆದರೇ ಗ್ರಾಮದ  ಮುಸ್ಲಿಂ ಸಮಾಜದ ವ್ಯಕ್ತಿ ಬುಡ್ಡೆಸಾಬ ನದಿಸಾಬ ಕಕ್ಕೆರಕರ(65)  ಮಧ್ಯಾಹ್ನ ನಿಧನ ಹೊಂದಿದರು. ಇದರಿಂದ ಗ್ರಾಮದಲ್ಲಿ ಸೂತಕದ ವಾತಾವರಣ ನಿರ್ಮಾಣವಾಯಿತು. ಆದರೆ, ನಿಧನ ಹೊಂದಿದ ವ್ಯಕ್ತಿ ಅನ್ಯ ಧರ್ಮದ ವ್ಯಕ್ತಿ ಎಂದು ಪರಿಗಣಿಸದ ಹಿಂದೂ ಸಮಾಜ ಸೋಮವಾರ ನಡೆಸಲು ಉದ್ದೇಶಿಸಿದ್ದ ಎಲ್ಲ ಕಾರ್ಯಕ್ರಮಗಳನ್ನು  ಗ್ರಾಮಸ್ಥರು ರದ್ದುಗೊಳಿಸಿದರು. 

ಈ ಕುರಿತು ಮಾತನಾಡಿದ ತೆಗ್ನಳ್ಳಿ ಗ್ರಾಮದವರು ಆಗಿರುವ ಹಾಗೂ ಹಳಿಯಾಳ‌ ಮಾರ್ಕೆಟಿಂಗ್ ಸೊಸೈಟಿ ಅಧ್ಯಕ್ಷ ತುಕಾರಾಮ ಗೌಡ ಅವರು, ಬುಡ್ಡೆಸಾಬ ನದಿಸಾಬ ಕಕ್ಕೆರಕರ ಅವರು ಹಿಂದು ಸಮಾಜದ ಎಲ್ಲ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ನಾವು ಸೌಹಾರ್ದತೆಯಿಂದ ಇದ್ದೆವು. ಇದರಿಂದ ಅವರೂ ನಮ್ಮವರೇ ಎಂದು ಗ್ರಾಮದಲ್ಲಿ ಇಂದು ನಡೆಯಬೇಕಿದ್ದ ಎಲ್ಲ ಕಾರ್ಯಕ್ರಮಗಳನ್ನು ರದ್ದು ಮಾಡಿದ್ದು, ಮಂಗಳವಾರ ಕಾರ್ಯಕ್ರಮ ನಡೆಸಲಾಗುವುದು ಎಂದು ತಿಳಿಸಿದ್ದಾರೆ.