ಜಿಲ್ಲೆ

ಪೊಲೀಸರಿಗೆ ಅಶ್ಲೀಲವಾಗಿ ಕೈ ಸನ್ನೆ ಮಾಡುತ್ತಿದ್ದ ಸವಾರ... ತಪಾಸಣೆ ವೇಳೆ ಬಯಲಾಯ್ತು 55 ಪ್ರಕರಣ

arunakunigal

ಬೆಂಗಳೂರು: ದ್ವಿಚಕ್ರ ವಾಹನಕ್ಕೆ ನಕಲಿ ನಂಬರ್​ ಪ್ಲೇಟ್​ ಹಾಕಿಕೊಂಡು ಸಂಚಾರ ನಿಯಮ ಉಲ್ಲಂಘಿಸಿ ಪೊಲೀಸರಿಗೆ ಅಶ್ಲೀಲವಾಗಿ ಕೈಸನ್ನೆ ಮಾಡುತ್ತಿದ್ದವ ಕೊನೆಗೂ ಸಿಕ್ಕಿಬಿದ್ದಿದ್ದಾನೆ.

ಪಟ್ಟೇಗಾರಪಾಳ್ಯದ ಆರ್​.ನಿಖಿಲ್ ಬಂಧಿತ. ಜು.3ರ ಬೆಳಗ್ಗೆ ವಿಜಯನಗರದ ಮಾರೇನಹಳ್ಳಿ ಜಂಕ್ಷನ್​ನಲ್ಲಿ ಕಾನ್​ಸ್ಟೆಬಲ್​ ಹರೀಶ್​, ಡಿಜಿಟಲ್​ ಪ್ರಕರಣ ದಾಖಲಿಸುತ್ತಿದ್ದರು. ಈ ವೇಳೆ ವಿಜಯನಗರ ಕ್ಲಬ್​ ರಸ್ತೆ ಕಡೆಯಿಂದ ದ್ವಿಚಕ್ರ ವಾಹನದಲ್ಲಿ ಬಂದ ನಿಖಿಲ್​, ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದಿದ್ದ. ಕಾನ್​ಸ್ಟೆಬಲ್​ ತಮ್ಮ ಮೊಬೈಲ್​ನಲ್ಲಿ ಫೋಟೋ ತೆಗೆದುಕೊಳ್ಳಲು ಮುಂದಾದಾಗ ಅಶ್ಲೀಲವಾಗಿ ಕೈಸನ್ನೆ ಮಾಡಿದ್ದ. ಈ ವೇಳೆ ಆರೋಪಿಯನ್ನು ಸ್ಥಳೀಯರು ಸುತ್ತುವರಿದು ಹಿಡಿದಿದ್ದರು. ಈತನ ಹತ್ತಿರ ಕಾನ್​ಸ್ಟೆಬಲ್​ ಹೋಗುತ್ತಿದಂತೆ ದ್ವಿಚಕ್ರ ವಾಹನವನ್ನು ಸ್ಥಳದಲ್ಲೇ ಬಿಟ್ಟು ಆರೋಪಿ ಪರಾರಿಯಾಗಿದ್ದ.

ದ್ವಿಚಕ್ರ ವಾಹನವನ್ನ ವಶಕ್ಕೆ ಪಡೆದು ಪರಿಶೀಲನೆ ನಡೆಸಿದಾಗ ನಂಬರ್​ ಪ್ಲೇಟ್​ ನಕಲಿ ಎಂಬುದು ಗೊತ್ತಾಗಿತ್ತು. ಸಂಚಾರ ನಿಯಮ ಉಲ್ಲಂಘನೆಯ 55 ಪ್ರಕರಣ ಪತ್ತೆಯಾಗಿತ್ತು. ದ್ವಿಚಕ್ರ ವಾಹನ ಮಾಲೀಕ ಪಟ್ಟೇಗಾರಪಾಳ್ಯದ ನಿಖಿಲ್​ ಎಂಬಾತನ ವಿರುದ್ಧ ವಿಜಯನಗರ ಸಂಚಾರ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದ್ದು, ದ್ವಿಚಕ್ರ ವಾಹನ ಜಪ್ತಿ ಮಾಡಿ 28,500 ರೂ. ದಂಡ ವಸೂಲಿ ಮಾಡಿದ್ದಾರೆ. ತಲೆಮರೆಸಿಕೊಂಡಿದ್ದ ಆರೋಪಿ ನಿಖಿಲ್ ಮಂಗಳವಾರ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಎಎನ್​ಪಿಆರ್​ ಅಸ್ತ್ರ: ಬೈಕ್​ಗಳಿಗೆ ನಕಲಿ ನಂಬರ್​ ಪ್ಲೇಟ್​ ಬಳಸಿ ಸಂಚಾರ ನಿಯಮ ಉಲ್ಲಂನೆ ಮಾಡುವುದರ ಜತೆಗೆ ಸಂಚಾರ ಪೊಲೀಸರಿಗೆ ಸವಾರರು ಅಶ್ಲೀಲವಾಗಿ ಕೈಸನ್ನೆ ಮಾಡುತ್ತಾರೆ. ಇಂತವರ ಫೋಟೋ ತೆಗೆದು ಆಟೋಮೆಟಿಕ್​ ನಂಬರ್​ ಪ್ಲೇಟ್​ ರೆಕ್ನೋನೇಷನ್​ ಕ್ಯಾಮರಾ (ಎಎನ್ಪಿಆರ್​) ಸಹಾಯದಿಂದ ಅಸಲಿ ವಾಹನಗಳ ಮಾಲೀಕ ಪತ್ತೆ ಮಾಡಲಾಗುತ್ತದೆ. ಆನಂತರ ನಕಲಿ ನಂಬರ್​ ಪ್ಲೇಟ್​ ಬಳಸುವ ವಾಹನ ಸವಾರರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿ ಶಿಸ್ತು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ವಾಹನಗಳಿಗೆ ನಕಲಿ ನಂಬರ್​ ಪ್ಲೇಟ್​ ಬಳಸಿ ಸಂಚಾರ ನಿಯಮ ಉಲ್ಲಂಘಿಸುವರ ಸಂಖ್ಯೆ ಹೆಚ್ಚಾಗಿದೆ. ತಾಂತ್ರಿಕ ಮಾಹಿತಿ ಆಧರಿಸಿ ಇಂತಹ ವಾಹನಗಳನ್ನು ಪತ್ತೆ ಮಾಡಲಾಗುತ್ತದೆ.

| ಡಾ.ಬಿ.ಆರ್​. ರವಿಕಾಂತೇಗೌಡ ಜಂಟಿ ಪೊಲೀಸ್​ ಆಯುಕ್ತ(ಸಂಚಾರ)