ಜಿಲ್ಲೆ

ಕುಜ ದೋಷಕ್ಕೆ ಮಹಿಳಾ ಪೊಲೀಸ್​ ಬಲಿ! ಮದ್ವೆ ನಿರಾಕರಿಸಿ ವಿಷ ಕುಡಿಸಿದ್ದ ಪ್ರಿಯಕರ... ಶಿವಮೊಗ್ಗದಲ್ಲಿ ಮನಕಲಕುವ ಘಟನೆ

ಶಿವಮೊಗ್ಗ: ಪರಸ್ಪರ 6 ವರ್ಷ ಪ್ರೀತಿಸಿದ್ದರೂ ಜ್ಯೋತಿಷಿಯ ಮಾತು ನಂಬಿ ಮದ್ವೆ ನಿರಾಕರಿಸಿ ಪ್ರಿಯಕರ ಕೊಟ್ಟ ವಿಷವನ್ನ ಕುಡಿದು ಸತತ 18 ದಿನ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿದ್ದ ಮಹಿಳಾ ಪೇದೆಯೊಬ್ಬರು ಶುಕ್ರವಾರ ಬೆಳಗ್ಗೆ ಮಣಿಪಾಲ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ತೀರ್ಥಹಳ್ಳಿ ಠಾಣೆಯ ಮಹಿಳಾ ಪೇದೆ ಸುಧಾ(29) ಮೃತರು. ಭದ್ರಾವತಿ ತಾಲೂಕಿನ ಕಲ್ಲಾಪುರದ ಸುಧಾ ಅವರು ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. 6 ವರ್ಷದ ಹಿಂದೆ ತೀರ್ಥಹಳ್ಳಿ ಅರಣ್ಯ ಇಲಾಖೆ ಅಧಿಕಾರಿ ಪ್ರವೀಣ್ ಸದಾಶಿವ ಮೊಕಾಶಿ ಅವರ ಪರಿಚಯವಾಗಿತ್ತು. ಇಬ್ಬರ ನಡುವೆ ಪ್ರೇಮಾಂಕುರವಾಗಿ ಮದ್ವೆ ಆಗಲು ನಿರ್ಧರಿಸಿದ್ದರು. ಪರಸ್ಪರ 6 ವರ್ಷದಿಂದ ಪ್ರೀತಿಸುತ್ತಿದ್ದ ಈ ಜೋಡಿಯ ಮದ್ವೆಗೆ ಮನೆಯವರಿಂದಲೂ ಗ್ರೀನ್​ ಸಿಗ್ನಲ್​ ಸಿಕ್ಕಿತ್ತು. ಬೇರೆ ಬೇರೆ ಜಾತಿಯಾದರೂ ಸರ್ಕಾರಿ ಕೆಲಸದಲ್ಲಿದ್ದ ಕಾರಣ ಎರಡೂ ಕುಟುಂಬದವರೂ ಒಪ್ಪಿದ್ದರು.

ಈ ನಡುವೆ ಪ್ರವೀಣ್ ಅವರ ತಾಯಿ ಲಕ್ಷ್ಮೀ, ಭಾವಿ ಸೊಸೆಯ ಜಾತಕ ತೆಗೆದುಕೊಂಡು ಜ್ಯೋತಿಷಿ ಬಳಿ ಹೋಗಿದ್ದರು. ಜಾತಕ ನೋಡಿದ ಜ್ಯೋತಿಷಿ, ಯುವತಿಗೆ ಕುಜ ದೋಷ ಇದೆ. ಈ ದೋಷ ಇದ್ದಾಕೆಯನ್ನ ಮದ್ವೆಯಾದರೆ ನಿಮ್ಮ ಮಗನ ಆಯಸ್ಸು ಕಡಿಮೆ ಆಗುತ್ತೆ ಎಂದಿದ್ದಾನೆ. ಆತಂಕಗೊಂಡ ಯುವಕನ ತಾಯಿ, ಮದ್ವೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಮದ್ವೆ ಬಗ್ಗೆ ನೂರಾರು ಕನಸು ಕಟ್ಟಿಕೊಂಡಿದ್ದ ಯುವತಿ, ಈ ವಿಷಯ ಕೇಳಿ ಗಾಬರಿಯಾಗಿ ಪ್ರಿಯಕರ ಕೆಲಸ ಮಾಡುತ್ತಿದ್ದ ಭದ್ರಾವತಿ ತಾಲೂಕಿನ ಉಬ್ರಾಣಿಗೆ ತೆರಳಿದ್ದಳು. ತಾಯಿ ಮಾತು ಮೀರಿ ಮದುವೆ ಆಗಲು ಸಾಧ್ಯವಿಲ್ಲವೆಂದು ಪ್ರಿಯಕರ ಪ್ರವೀಣ್ ಹೇಳಿದ್ದಾನೆ. ಮದುವೆ ವಿಚಾರದಲ್ಲಿ ಸುಧಾ ಗಲಾಟೆ ಮಾಡಿದ್ದಾಳೆ. ಆಗ ಆಕೆಯನ್ನು ಬೈಕ್‌ನಲ್ಲಿ ಕೂರಿಸಿಕೊಂಡ ಪ್ರವೀಣ್ ಸಾವು ಹೇಗಿರುತ್ತದೆ ಎಂಬುದನ್ನು ತೋರಿಸುತ್ತೇನೆಂದು ಧಮ್ಕಿ ಹಾಕಿದ್ದಾನೆ.

ವಿಷ ಕುಡಿಸಿದ್ದ ಪ್ರಿಯಕರ: ಒಂದಾಗಿ ಬದುಕಲು ಸಾಧ್ಯವಿಲ್ಲ ಎಂದಾದ ಮೇಲೆ ಒಟ್ಟಿಗೆ ಸಾಯೋಣವೆಂದು ಪ್ರವೀಣ್ ಹೇಳಿದ್ದಾನೆ. ಅದಕ್ಕೆ ಸುಧಾ ಕೂಡ ಒಪ್ಪಿದ್ದಾಳೆ. ಮೇ 31ರಂದು ಭದ್ರಾವತಿ ಎಪಿಎಂಸಿ ಯಾರ್ಡ್‌ಗೆ ಬೈಕ್​ನಲ್ಲಿ ಪ್ರೇಯಸಿಯನ್ನು ಕರೆತಂದು, ವಿಷ ಕುಡಿಯೋಣ ಎಂದು ಹೇಳಿ ಮೊದಲು ಪ್ರಿಯತಮೆಗೆ ಕುಡಿಸಿದ್ದಾನೆ. ನಂತರ ಆತನೂ ಕುಡಿದಿದ್ದಾನೆ. ಈ ಸುದ್ದಿ ಕೇಳಿ ಡಿಆರ್‌ಎಫ್ ಸುರೇಂದ್ರ ಅವರು ಇಬ್ಬರನ್ನೂ ಭದ್ರಾವತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಸುಧಾಳನ್ನು ಮಣಿಪಾಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಜೂ.13ರಂದು ಲಿಖಿತ ಹೇಳಿಕೆ ನೀಡಿದ್ದ ಸುಧಾ, ಪ್ರಿಯಕರ ಪ್ರವೀಣ್ ವಿಷ ಕುಡಿದದ್ದು ನನಗೆ ಕಾಣಲಿಲ್ಲ ಎಂದಿದ್ದಾರೆ. ಮದುವೆಯಾಗಲು ನಿರಾಕರಣೆ ಹಾಗೂ ವಿಷ ಕುಡಿಯಲು ಕಾರಣ ಎನ್ನಲಾದ ಪ್ರವೀಣ್ ಹಾಗೂ ಆತನ ತಾಯಿ ಲಕ್ಷ್ಮೀ ವಿರುದ್ಧ ಹಳೇನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಸತತ 18 ದಿನ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಸುಧಾ, ಶುಕ್ರವಾರ ಬೆಳಗಿನ ಜಾವ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದರು. ಜ್ಯೋತಿಷಿಯ ಮಾತು ನಂಬಿ ಸುಧಾಳ ದುರಂತ ಅಂತ್ಯಕ್ಕೆ ಕಾರಣವಾಗಿದ್ದು ಮಾತ್ರ ವಿಪರ್ಯಾಸ.